ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಹತ್ತಿರ ಹರಿಯುವ ವೇದವತಿ ಹಗರಿ ನದಿ ಮೇಲಿನ ಸೇತುವೆ ದಾಟುತ್ತಿರುವ ವೇಳೆ ಲಾರಿಯೊಂದು ನೀರಿಗೆ ಉರುಳಿ, ಚಾಲಕ ಮತ್ತು ಮಾಲೀಕ ಮಂಗಳವಾರ ತಡರಾತ್ರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.ಮುಳ್ಳಿನ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡ ಕಾರಣ 52 ವರ್ಷದ ಅಹ್ಮದ್ ಬಾಷಾನನ್ನು ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ರಕ್ಷಣೆ ಮಾಡಲಾಗಿದ್ದು, ಲಾರಿ ಮಾಲೀಕ 28 ವರ್ಷದ ಹುಸೇನಿ ಸಾಬ್ ಪತ್ತೆಯಾಗದ ಕಾರಣ ಕಾರ್ಯಾಚರಣೆ ಮುಂದುವರಿದಿದೆ.
ನಡೆದದ್ದೇನು?: ಧಾರಾಕಾರವಾಗಿ ಮಳೆ ಸುರಿದು ಸೇತುವೆ ಮೇಲೆ ನೀರು ಪ್ರವಾಹೋಪಾದಿಯಾಗಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಲಾರಿ ಚಾಲನೆ ಮಾಡಿಕೊಂಡು ಹೋಗುವಾಗ ಈ ದುರಂತ ಸಂಭವಿಸಿದೆ. ಮುಳುಗಿದ ಲಾರಿಯ ಮೇಲೆ ನಿಂತು ಕೂಗಿಕೊಂಡಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಕತ್ತಲಲ್ಲೂ ಕಾರ್ಯಾಚರಣೆ ಆರಂಭಿಸಿದರು.
ಕಾರ್ಯಾಚರಣೆ ಸಂದರ್ಭ ರಕ್ಷಣಾ ಸಿಬ್ಬಂದಿಯ ಬೋಟ್‌ವೊಂದು ನದಿಯಲ್ಲಿರುವ ಮುಳ್ಳಿನ ಬೇಲಿಗೆ ಸಿಕ್ಕಿಹಾಕಿಕೊಂಡಿತ್ತು. ಇನ್ನೊಂದು ಬೋಟ್ ಮೂಲಕ ಅವರನ್ನು ರಕ್ಷಿಸಲಾಗಿದೆ. ಬುಧವಾರ ಬೆಳಗ್ಗೆ ಡಿಸಿ ಪವನ್ ಕುಮಾರ್ ಮಾಲಪಾಟಿ ಭೇಟಿ ನೀಡಿ, ಮಾಹಿತಿ ಪಡೆದರು. ಎಸ್‌ಪಿ ಸೈದುಲ್ ಅದಾವತ್, ಶಾಸಕ ಎಂ.ಎಸ್.ಸೋಮಲಿಂಗಪ್ಪ, ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್‌ಐ ರಂಗಯ್ಯ, ಕಂದಾಯ ಅಧಿಕಾರಿ ಮಂಜುನಾಥ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಇತರರು ಇದ್ದರು.