ಸಿರಗುಪ್ಪ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಿಪಿಐ ಸಂಗಮೇಶ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. 
ಜಿಲ್ಲೆ

ಲೋಕಾಯುಕ್ತರಿಗೆ ಗ್ರಾಮಸ್ಥರಿಂದ ಸಮಸ್ಯೆಗಳ ದೂರು

ಕುರುವತ್ತಿ ಶ್ರೀಕಾಂತಪ್ಪ

ಸಿರಗುಪ್ಪ: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಸಿಪಿಐ ಸಂಗಮೇಶ್‌ರಿಂದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಮಂಗಳವಾರ ನಡೆಯಿತು.

ಹಚ್ಚೊಳ್ಳಿ ಗ್ರಾಮದಲ್ಲಿ ಕೆಲವು ರೈತರು ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ದೂರು ಸಲ್ಲಿಸಿ 6 ತಿಂಗಳಾದರೂ ಕ್ರಮ ತೆಗೆದುಕೊಂಡಿಲ್ಲ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥ ರಾಜಕುಮಾರ ದೂರು ಸಲ್ಲಿಸಿದರು.

ನಗರದ 15ನೇ ವಾರ್ಡ್‌ನಲ್ಲಿ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡದಿದ್ದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ವಾರ್ಡ್‌ನ ನಿವಾಸಿ ಬಸವರಾಜ ಒತ್ತಾಯಿಸಿದರು.

ನಂತರ ಸಿಪಿಐ ಸಂಗಮೇಶ ಮಾತನಾಡಿ, ರಸ್ತೆ, ಕುಡಿವ ನೀರು, ಆರೋಗ್ಯ ಇಲಾಖೆಗಳಲ್ಲಿ ವೈದ್ಯರ ಕೊರತೆ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ 10 ಅರ್ಜಿಗಳು ಬಂದಿವೆ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತೇವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.