ಸಿರಗುಪ್ಪ: ನಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಉತ್ತಮ ಪರಿಸರ, ಆರೋಗ್ಯ ಹೊಂದಬಹುದು ಎಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ್ ಯಾದವಾಡ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತಿತರ ಇಲಾಖೆಗಳ ಸೇರಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಛತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧಿ ಅವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದರು. ನಮಗೆ ಅನೇಕ ರೋಗಗಳು ಬರುವುದೇ ಚರಂಡಿ, ಬಯಲು ಜಾಗದಲ್ಲಿ ತ್ಯಾಜ್ಯಗಳಿಂದಾಗಿ. ಮೊದಲು ಸುತ್ತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ನಮಗೆ ನೆಮ್ಮದಿ, ಶಾಂತಿ, ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.
ನ್ಯಾಯಾಲಯದ ಆವರಣದಲ್ಲಿ ಫೆ.11ರಂದು ಬೃಹತ್ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕಕ್ಷಿದಾರರು ಕೋರ್ಟ್‌ಗೆ ಅಲೆದು ಸಮಯ, ಶ್ರಮ, ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಕೀಲರಾದ ಮಲ್ಲಿಗೌಡ, ವೆಂಕಟೇಶನಾಯಕ್, ಪಿ.ಮಹದೇವಪ್ಪ, ಯು.ವೆಂಕೋಬ, ಪ್ಯಾಟೆಗೌಡ, ಕೆ.ಶಿವಕುಮಾರ್‌ಸ್ವಾಮಿ ಇತರರು ಇದ್ದರು.