ಸಿರಗುಪ್ಪ: ಮಕ್ಕಳಲ್ಲಿ ಲಿಂಗ, ಭಾಷೆ, ಪ್ರಾಂತೀಯ, ಜಾತಿ, ಧರ್ಮ ಮತ್ತು ಜನಾಂಗಗಳಲ್ಲಿ ತಾರತಮ್ಯ ಮಾಡಬಾರದು ಎಂದು ಜೆಎಂಎಫ್‌ಸಿ ನ್ಯಾಯಾದೀಶರಾದ ಹಾಜಿ ಹುಸೇನ್‌ಸಾಬ್ ಯಾದವಾಡ ಕಿವಿಮಾತು ಹೇಳಿದರು.
ನಗರದ ಖಾಸಗೀ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಮಂಗಳವಾರ ಆಯೋಜಿಸಿದ್ದ ‘ಬೇಟಿ ಬಚಾವೋ ಬೇಟಿ ಪಢಾವೋ’ ಅಂಗವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಮಕ್ಕಳನ್ನೂ ಸಮಾನವಾಗಿ ಕಾಣಬೇಕು. ಭ್ರಾತೃತ್ವ ಹಾಗೂ ಭಾವೈಕ್ಯವನ್ನು ಪಡೆದುಕೊಳ್ಳುವಂತೆ ಪಾಲಕರು, ಗುರು ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕಾನೂನುಗಳಿವೆ. ಕಡುಬಡತನದಲ್ಲಿರುವ ಎಸ್ಸಿ, ಎಸ್ಟಿ, ಅಂಗವಿಕಲರು, ಮಹಿಳೆಯರು ಮತ್ತು ಮಕ್ಕಳು ಸೇರಿ ಒಟ್ಟು 13 ವರ್ಗದವರಿಗೆ ತಾಲೂಕು ಕಾನೂನು ಸೇವಾ ಸಮಿತಿ ಉಚಿತವಾಗಿ ಕಾನೂನು ಸಲಹೆ ನೀಡುತ್ತದೆ. ಸಂಬಂಧ ಪಟ್ಟವರು ಇದರ ಸದುಪಯೋಗ ಪಡೆಯಬೇಕು ಎಂದರು.
ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ, ಟಿ.ಎಚ್.ಒ. ಡಾ.ಈರಣ್ಣ, ಸಿಡಿಪಿಒ ಎ.ಕೆ.ಜಲಾಲಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರು, ವಿದ್ಯಾರ್ಥಿಗಳು ಇದ್ದರು.