ಸಿರಗುಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಬಿ.ಎಂ.ನಾಗರಾಜ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು. ಡಿಎಚ್‌ಒ ಡಾ.ವೈ.ರಮೇಶ ಬಾಬು, ಟಿಎಚ್‌ಒ ದಮ್ಮೂರು ಬಸವರಾಜ ಇದ್ದರು.  
ಜಿಲ್ಲೆ

ಸಿರಗುಪ್ಪ ಆಸ್ಪತ್ರೆ ಮೇಲ್ದರ್ಜೆಗೆ ಸಿಎಂ ಅನುಮತಿ

ಸಿರಗುಪ್ಪ: ಸಿರಗುಪ್ಪ ತಾಲೂಕು ಆಸ್ಪತ್ರೆಯನ್ನು 250 ಹಾಸಿಗೆಗೇರಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದಾಗ ಅವರು ತಾಂತ್ರಿಕ ಮತ್ತು ಸಿಬ್ಬಂದಿ ಸಮಸ್ಯೆಯಿಂದಾಗಿ 150 ಹಾಸಿಗೆಗೆ ಮೇಲ್ದರ್ಜೆಗೇರಿಸಿ ಅವಕಾಶ ನೀಡಿದ್ದಾರೆ ಎಂದು ಶಾಸಕ ಬಿ.ಎಂ.ನಾಗರಾಜ ತಿಳಿಸಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಈಗಿರುವ 100 ಹಾಸಿಗೆ ಆಸ್ಪತ್ರೆಯ ನೆಲ ಮಹಡಿ ಕೊಠಡಿಗಳು ಕಾರ್ಯ ನಿರ್ವಹಿಸಲು ಯೋಗ್ಯವಿಲ್ಲವೆಂದು ಇಂಜಿನಿಯರ್ ವರದಿ ನೀಡಿದ್ದಾರೆ.

ಇದರ ಆಧಾರದ ಮೇಲೆ ಹಳೆಯ ಕಟ್ಟಡ ನೆಲಸಮಗೊಳಿಸಿ ನೂತನ ಕಟ್ಟಡ ಕಟ್ಟಲು ಎರಡ್ಮೂರು ತಿಂಗಳಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

150 ಹಾಸಿಗೆ ಆಸ್ಪತ್ರೆ ಕಟ್ಟಡ ಕಟ್ಟಲು ಅಂದಾಜು 51 ಕೋಟಿ ರೂ. ಬೇಕಾಗುತ್ತದೆ.

ಆದರೆ, 50 ಹಾಸಿಗೆ ಆಸ್ಪತ್ರೆಗೆ ಬೇಕಾದ 16.5 ರೂ.ಕೋಟಿ ಅನುದಾನ ಮಾತ್ರ ಸರ್ಕಾರ ನೀಡಿದೆ. ಬಾಕಿ ಅನುದಾನವನ್ನು ವಿವಿಧ ಇಲಾಖೆಯಿಂದ ಪಡೆಯಲು ಹಾಗೂ ಮುಂದಿನ ದಿನಗಳಲ್ಲಿ 250 ಹಾಸಿಗೆ ಆಸ್ಪತ್ರೆಯನ್ನು ಹಂತ-ಹಂತವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತೆಕ್ಕಲಕೋಟೆ 30 ಹಾಸಿಗೆ ಆಸ್ಪತ್ರೆಯನ್ನು 50 ಹಾಸಿಗೆಗೆ ಮೇಲ್ದರ್ಜೆಗೇರಿಸಿದ್ದು, ಇದಕ್ಕೆ 10 ಕೋಟಿ ರೂ. ಅನುದಾನ ಬಂದಿದೆ. ಶೀಘ್ರವೇ ಕಾಮಗಾರಿ ಶುರು ಮಾಡಲಾಗುವುದು. ತಾಲೂಕು ಕೇಂದ್ರದಲ್ಲಿ ತಾಯಿ ಮತ್ತು ಮಕ್ಕಳ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಲು ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆದಿದೆ ಎಂದು ಶಾಸಕ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶಬಾಬು ಮಾತನಾಡಿ, ಸಿರುಗುಪ್ಪ ಮತ್ತು ತೆಕ್ಕಲಕೋಟೆ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಶಾಸಕರು ಸ್ಥಳಾವಕಾಶ ಕಲ್ಪಿಸಬೇಕೆಂದು ಕೋರಿದರು.

ಆರೋಗ್ಯ ಇಲಾಖೆ ಎಇಇ ವೆಂಕಟೇಶ್ವರ ರಾವ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಿವೇಕಾನಂದ, ಸ್ತ್ರೀರೋಗ ತಜ್ಞ ಡಾ.ಪ್ರಶಾಂತ, ಶಸ್ತ್ರಚಿಕಿತ್ಸಕ ಡಾ.ಆನಂದ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.