ಸಿರಗುಪ್ಪ: ಶ್ರೀಸಾಮಾನ್ಯರ ಮನೆ ಅಂಗಳದಲ್ಲಿ ಸಿಎಸ್‌ಸಿ(ಸಾಮಾನ್ಯ ಸೇವಾ ಕೇಂದ್ರ) ಸೇವೆಗಳನ್ನು ಉತ್ತಮ ರೀತಿಯಲ್ಲಿ ನೀಡುವ ಕಾರ್ಯವನ್ನು ಸೇವಾದಾರರು ಮಾಡಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ರೋಹಿತಾಕ್ಷ ಹೇಳಿದರು.
ತಾಲೂಕಿನಲ್ಲಿ ಗುರುವಾರ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಿಎಸ್‌ಸಿ ಸೇವಾದಾರರ ಸೇವೆಗಳ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇಂದ್ರ ಸರ್ಕಾರದ ಸಾಮಾನ್ಯ ಸೇವೆಗಳನ್ನು ನೀಡಲು 52 ಸಿಎಸ್‌ಸಿ ಸೇವಾದಾರರನ್ನು ನಿಯೋಜಿಸಿದೆ. ಸರ್ಕಾರದ ಸಾಮಾನ್ಯ ಸೇವೆಗಳನ್ನು ಉತ್ತಮ ರೀತಿಯಲ್ಲಿ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು ಸ್ಥಾಪಿತವಾಗಿವೆ. ಶ್ರೀಸಾಮಾನ್ಯರಿಗೆ ಸೇವಾದಾರರು ವಿವಿಧ ಸೇವೆಗಳನ್ನು ಉತ್ತಮವಾಗಿ ನೀಡಬೇಕು ಎಂದು ಹೇಳಿದರು.
ಸಿರುಗುಪ್ಪ ತಾಲೂಕಿನಲ್ಲಿ 23,739 ನಾಗರಿಕರಿಗೆ ಈ ಶ್ರಮ ಕಾರ್ಡ್, ಆಯುಷ್ಮಾನ್ ಕಾರ್ಡ್ 67,349 ಜನರಿಗೆ ನೋಂದಾಯಿಸಲಾಗಿದೆ. 9,240 ಪಾನ್‌ಕಾರ್ಡ್ ಸೇವೆಗಳನ್ನು ಒದಗಿಸಲಾಗಿದೆ. ಉಳಿದಂತೆ ಪ್ರಧಾನ ಮಂತ್ರಿ ಡಿಜಿಟಲ್ ಸಾಕ್ಷರತಾ ಅಭಿಯಾನ ಸೇವೆ ಮೂಲಕ ಗ್ರಾಮೀಣ ಜನತೆಗೆ ಡಿಜಿಟಲ್ ಸಾಕ್ಷರತೆಯನ್ನು ನೀಡಲಾಗುತ್ತಿದೆ. ಪ್ರಸ್ತುತ ದಿನಮಾನಗಳಿಗೆ ಡಿಜಿಟಲ್ ಸಾಕ್ಷರತೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ತಾಲೂಕಿನ ಯೋಜನಾಧಿಕಾರಿ ಸುಧೀರ್ ಹಂಗಳೂರು, ಜಿಲ್ಲಾ ನೋಡಲ್ ಅಧಿಕಾರಿ ಶಿವಾನಂದ್, ತಾಲೂಕು ನೋಡಲ್ ಅಧಿಕಾರಿ ಲಕ್ಷ್ಮೀಕಾಂತ್ ಹಾಗೂ ಸಿಎಸ್‌ಸಿ ಸೇವಾದಾರರು ಭಾಗವಹಿಸಿದ್ದರು.