ಜಿಲ್ಲೆ

ಸಮಗ್ರ ಕೃಷಿಯಿಂದ ನಿರಂತರ ಆದಾಯ

ಸಿರಗುಪ್ಪ: ರೈತರ ಆರ್ಥಿಕ ಪರಿಸ್ಥಿತಿ ಮತ್ತು ಜೀವನಮಟ್ಟ ಸುಧಾರಣೆಗೆ ಸಮಗ್ರ ಕೃಷಿ ಪದ್ಧತಿ ಸಹಕಾರಿಯಾಗಿದೆ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಡಾ.ಅಶೋಕ್ ಕುಮಾರ್ ಗಡ್ಡಿ ತಿಳಿಸಿದರು.

ನಗರದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಐಸಿಎಆರ್ (ಟಿ.ಎಸ್.ಪಿ) ಯೋಜನೆ ಕೃಷಿ ವಿ.ವಿ. ರಾಯಚೂರು ಮತ್ತು ಕೃಷಿ ಸಂಶೋಧನಾ ಕೇಂದ್ರ ಸಿರಗುಪ್ಪ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಪದ್ಧತಿಯಿಂದ ಜೀವನ ಭದ್ರತೆ ಕುರಿತು ಪರಿಶಿಷ್ಠ ಪಂಗಡ ರೈತರ ಒಂದು

ದಿನದ ತರಬೇತಿ ಕಾರ್ಯಾಗಾರ ಮತ್ತು ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಪ್ರತಿ ಬಾರಿ ಬೆಳೆದ ಬೆಳೆಗಳನ್ನೇ ಮತ್ತೆ ಮತ್ತೆ ಬೆಳೆಯುತ್ತಿರುವುದರಿಂದ ಆದಾಯ ಕುಂಠಿತಗೊಳ್ಳುತ್ತಿದೆ. ಮುಖ್ಯ ಬೆಳೆಗಳ ಜತೆಗೆ ಮಿಶ್ರ ಬೇಸಾಯ ಅಲ್ಲದೆ ಕೃಷಿ ಅವಲಂಬಿತ ಉಪ ಕಸುಬುಗಳಾದ ಪಶು ಸಂಗೋಪನೆ, ಕೋಳಿ ಸಾಕಣೆ, ಮೀನು ಸಾಕಣೆ ಮುಂತಾದ ಕಸುಬುಗಳನ್ನು ಕೈಗೊಂಡರೆ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಸಹ ಪ್ರಾಧ್ಯಾಪಕ ಡಾ.ಪ್ರಭುಲಿಂಗ ತೆವರಿ ಮಾತನಾಡಿ, ಬೆಳೆ ಆಧಾರಿತ ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆ ಉತ್ಪಾದನೆ ಮುಖ್ಯ ಗುರಿಯಾಗಿದ್ದು, ಇತರ ಪದ್ಧತಿಗಳು ಬೆಳೆ ಉತ್ಪಾದನೆಗೆ ಪೂರಕವಾಗಿರುತ್ತವೆ. ಇದರಲ್ಲಿ ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿ, ಮರ ಆಧಾರಿತ ಸಮಗ್ರ ಕೃಷಿ ಪದ್ಧತಿ, ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ, ರೇಷ್ಮೆ ಆಧಾರಿತ ಕೃಷಿ ಪದ್ಧತಿ, ಮೀನುಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಂಡರೆ ನಿರಂತರ ಆದಾಯ ಗಳಿಸಬಹುದು ಎಂದರು.

ತರಬೇತಿಯಲ್ಲಿ ಭಾಗವಹಿಸಿದ ಪರಿಶಿಷ್ಟ ಪಂಗಡದ 28 ರೈತರಿಗೆ ಕೃಷಿ ಸಂಬಂಧಿಸಿದ ಕಿಟ್‌ಗಳನ್ನು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ವಿತರಿಸಿದರು. ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಮಲ್ಲಿಕಾರ್ಜುನ ಬಳ್ಳೊಳ್ಳಿ, ಕ್ಷೇತ್ರ ಸಹಾಯಕ ಈರಪ್ಪ, ರೈತರಾದ ರಾಮಣ್ಣ, ಹುಲುಗಪ್ಪ, ಮಲ್ಲಮ್ಮ, ಮಾರೆಮ್ಮ, ಈರಮ್ಮ ಮತ್ತಿತರರಿದ್ದರು.