ಸಿರಗುಪ್ಪ: ಡಾ.ಎಸ್.ಎಲ್.ಭೈರಪ್ಪ ಅವರು ವಿಶ್ವವಿಖ್ಯಾತ ಕನ್ನಡ ಕಾದಂಬರಿಕಾರ, ಬರಹಗಾರರಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದ್ದು, ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ಭರಿಸಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಡಾ.ಕೆ.ಎಮ್.ಚಂದ್ರಕಾಂತ್ ಹೇಳಿದರು.
ಇದನ್ನೂ ಓದಿ: ಸಾಹಿತ್ಯದ ‘ಪರ್ವ’ ಮೆರೆದ ಸಾರಸತ್ವ ಲೋಕದ ದಿಗ್ಗಜ ಎಸ್.ಎಲ್. ಭೈರಪ್ಪ ಪಂಚಭೂತಗಳಲ್ಲಿ ಲೀನ | SL Byrappa
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಗುರುವಾರ ಆಯೋಜಿಸಿದ್ದ ಎಸ್.ಎಲ್.ಭೈರಪ್ಪಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೈರಪ್ಪ ಅವರ ಕಾದಂಬರಿಗಳು ಅನೇಕ ಭಾಷೆಗಳಿಗೆ ಭಾಷಾಂತರವಾಗಿವೆ. ಅವರು ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಇತಿಹಾಸ ಮತ್ತು ಸಂಸ್ಕೃತಿ ಪರಂಪರೆಯ ಮೇಲೆ ಅಗಾಧವಾದ ಪಾಂಡಿತ್ಯ ಭೈರಪ್ಪ ಅವರಲ್ಲಿತ್ತು. ಮಂದ್ರ, ಪರ್ವ, ವಂಶವೃಕ್ಷ, ದಾಟು, ಆವರಣ, ನಾಯಿ ನೆರಳು, ಮತದಾನ ಮುಂತಾದ ಕಾದಂಬರಿಗಳು ಅದಕ್ಕೆ ಸಾಕ್ಷಿಯಾಗಿವೆ. ಅವರಿಗೆ ಸಾಕಷ್ಟು ಪ್ರಶಸ್ತಿಗಳ ಜತೆಗೆ ಪದ್ಮಭೂಷಣ ಲಭಿಸಿರುವುದು ಸಾರ್ಥಕ ಬದುಕಿನ ಪ್ರತೀಕವಾಗಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಬಾಕಡೆ ಪಂಪಾಪತಿ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೃಷ್ಣಪ್ಪ, ಗ್ರಂಥಪಾಲಕ ಯಮನೂರಪ್ಪ, ಇಂಗ್ಲಿಷ್ ವಿಭಾಗದ ಪ್ರಶಾಂತ್ ಬಾಬು ಇತರರಿದ್ದರು.