ಸಿರಗುಪ್ಪ: ಪ್ರತಿಯೊಬ್ಬರೂ ಮಕ್ಕಳಿಗೆ ಧರ್ಮ ಸಂಸ್ಕಾರ ಹಾಗೂ ಗುರು-ಹಿರಿಯರ ಬಗ್ಗೆ ಗೌರವವನ್ನು ಸೂಚಿಸುವ ಮತ್ತು ಧಾರ್ಮಿಕ ಅಚರಣೆಗಳ ಮಹತ್ವ ಅಂಶಗಳನ್ನು ತಿಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶ್ರೀಗಳು ಸಲಹೆ ನೀಡಿದರು.
ನಗರದ ಪಿನಾಕಿ ಆಶ್ರಮದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಕಲ್ಯಾಣ ಮಂಟಪದಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜ ಮಂಗಳವಾರ ಹಮ್ಮಿಕೊಂಡಿದ್ದ ಜೀವನಾಮೃತ ಸಿದ್ದಾಂತಾ ಶಿಖಮಾಣಿ ಆಧ್ಯತ್ಮಾ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲ ಧರ್ಮಗಳ ಸಂದೇಶ ಒಂದೇಯಾಗಿದೆ. ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯ ಜೀವನಕ್ಕೆ ಪರಸ್ಪರ ಸಹಕಾರ ಮನೋಭಾವನೆ ಇರಬೇಕು. ಆಗ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಇತ್ತೀಚಿನ ತಾಂತ್ರಿಕ ಜಗತ್ತಿನಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ತಿಳಿಯದ ಕಾರಣ ಸಣ್ಣಪುಟ್ಟ ವಿಚಾರಗಳಿಗೂ ಜಗಳ, ವೈಮನಸ್ಸು, ದ್ವೇಷದ ಭಾವನೆ ಮೂಡಿ ಅಶಾಂತಿ ಮೂಡಿಸಿದೆ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ನಿತ್ಯವೂ ಮಠಮಾನ್ಯಗಳಲ್ಲಿ ನಡೆಯುವ ಪುರಾಣ ಪ್ರವಚನಗಳನ್ನು ಅಲಿಸಬೇಕು. ಆಗ ಆದರ್ಶ ವ್ಯಕ್ತಿಯಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಹಾಲ್ವಿ ಕರ್ಚಿಗನೂರ ಮಹಾಂತೇಶ್ವರ ಮಠದ ಅಭಿನವ ಮಹಾಂತಶ್ರೀ, ತೆಕ್ಕಲಕೋಟೆ ಕಂಬಳಿಮಠದ ವೀರಭದ್ರಶಿವಾಚಾರ್ಯ ಶ್ರೀಗಳು ಪ್ರವಚನ ನೀಡಿದರು. ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ವಿಶ್ವಜ್ಯೋತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಆರ್.ಬಸವಲಿಂಗಪ್ಪ, ಪ್ರಮುಖರಾದ ಎನ್.ಜಿ.ಬಸವರಾಜಪ್ಪ, ಬಿ.ಆರ್.ಚನ್ನಬಸವನಗೌಡ, ದೇಶನೂರು ವೆಂಕಟರೆಡ್ಡಿ, ಸಿದ್ದರಾಮಯ್ಯಸ್ವಾಮಿ, ಶಿಕ್ಷಕ ಚೆನ್ನಪ್ಪ, ಟಿ.ಎಂ.ಶಿವಕುಮಾರಸ್ವಾಮಿ ಇದ್ದರು.