ಸಿರಗುಪ್ಪ: ತಂತ್ರಜ್ಞಾನದಿಂದ ನೆರವಿನೊಂದಿಗೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸೈಬರ್ ಅಪರಾಧದಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಿ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಆರ್.ಎಚ್.ಅಶೋಕ್ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಮಾತನಾಡಿ, ತಂತ್ರಜ್ಞಾನ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್ ಅಪರಾಧದ ಕುರಿತು ಮಾಹಿತಿ ಪಡೆದರೆ ಪ್ರಕರಣ ದಾಖಲಿಸಲು ಸಹಾಯವಾಗುತ್ತದೆ ಎಂದರು.
ಡಿವೈಎಸ್‌ಪಿ ಡಾ.ಸಂತೋಷ ಚೌವ್ಹಾಣ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ 18 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರ ನಗ್ನ ಪೋಟೋ ಮತ್ತು ವಿಡಿಯೋ ನೋಡುವುದು, ಹಂಚಿಕೊಳ್ಳುವುದು ಅಪರಾಧವಾಗಿದೆ. ಸೈಬರ್ ವಂಚಕರು ಪಾಲಕರಿಗೆ ಕರೆ ಮಾಡಿ ನಿಮ್ಮ ಮಗನಿಗೆ ಅಪಘಾತವಾಗಿದೆ ಅಥವಾ ಬಂಧಿಸಲಾಗಿದೆ ಎಂದು ಹೇಳುವುದರೊಂದಿಗೆ ಹಣ ಕಳುಹಿಸುವಂತೆ ಹೆದರಿಸುತ್ತಾರೆ. ಮೊಬೈಲ್ ಕಳೆದ ತಕ್ಷಣ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಬೇಕು. ಬ್ಯಾಂಕಿನ ಖಾತೆ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಕರೆ ಮಾಡಿ ಯಾವುದೇ ದಾಖಲೆ ಇಲ್ಲದೆ ಸಾಲ ಕೊಡುತ್ತೇವೆಂದು ವಿವಿಧ ಮಾಹಿತಿ ಕೇಳಿ ಹಣ ಪಡೆದು ಮೋಸ ಮಾಡುತ್ತಾರೆ ಎಂದು ತಿಳಿಸಿದರು.
ಪೊಲೀಸರು, ಸಿಬಿಐ ಅಧಿಕಾರಿಗಳೆಂದು ಕರೆ ಮಾಡಿ ನಿಮ್ಮ ಆಧಾರ್ ಅಥವಾ ಬ್ಯಾಂಕ್‌ಖಾತೆಯಿಂದ ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ಭಯಪಡಿಸಿ ಹಣ ನೀಡುವಂತೆ ಬೆದರಿಕೆ ಹಾಕುತ್ತಾರೆ. ಇಂಥ ಘಟನೆ ಸಂಭವಿಸಿದ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಪೋಲಿಸ್ ಠಾಣೆಗೆ ದೂರು ನೀಡಬೇಕು. ಸೈಬರ್ ಕ್ರೈಂ ಮೂಲಕ ಹಣ ಕಳೆದುಕೊಂಡಲ್ಲಿ ಕೂಡಲೇ ಸೈಬರ್ ಸಹಾಯವಾಣಿ 1930 ಅಥವಾ 112ಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಡಿವೈಎಸ್ಪಿ ಮಾಹಿತಿ ನೀಡಿದರು.