ಸಿರಗುಪ್ಪ: ಬಳ್ಳಾರಿಯಲ್ಲಿ ಫೆ.28ರಂದು ನಡೆಯುವ ಕನಕದುರ್ಗಮ್ಮ ಸಿಡಿಬಂಡಿ ಮಹೋತ್ಸವದ ಅಂಗವಾಗಿ ನಗರದಲ್ಲಿ ಗಾಣಿಗ ಸಮಾಜದವರು ಸಿಡಿಬಂಡಿ ಎಳೆಯುವ ಜೋಡೆತ್ತುಗಳ ಮೆರವಣಿಗೆಯನ್ನು ಸೋಮವಾರ ನಡೆಸಿ, ಬಳ್ಳಾರಿಗೆ ಎತ್ತುಗಳನ್ನು ಕರೆದೊಯ್ದರು. ಇದಕ್ಕೂ ಮುನ್ನ ಎತ್ತುಗಳ ಮೈಗೆ ಜುಲಾಯಿ, ಹಣೆಯಲ್ಲಿ ಬೆಳ್ಳಿ ಪದಕ, ಕಾಲುಗಳಿಗೆ ಬೆಳ್ಳಿ ಕಡಗ, ಕೊಂಬುಗಳಿಗೆ ತುರಾಯಿ ಮತ್ತು ವಿವಿಧ ಹೂಗಳಿಂದ ಅಲಂಕರಿಸಿ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಗಾಣಿಗ ಸಮಾಜದವರ ಮನೆ ಮನೆಗಳಿಗೆ ತೆರಳುವ ಜೋಡೆತ್ತುಗಳ ಕಾಲಿಗೆ ಮಹಿಳೆಯರು ಮಡಿ ನೀರು ಹಾಕಿ, ಕುಂಕುಮ, ವಿಭೂತಿ ಹಚ್ಚಿ ಪೂಜೆ ಸಲ್ಲಿಸಿ ಅಕ್ಕಿ, ಬೆಲ್ಲದ ಪ್ರಸಾದ ನೀಡಿ ತೆಂಗಿನಕಾಯಿ ಒಡೆದು ಎತ್ತುಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಮ್ಮ ಸಮಾಜದಿಂದ ಒಂದು ಜೋಡೆತ್ತುಗಳನ್ನು ಬಳ್ಳಾರಿಯಲ್ಲಿ ನಡೆಯುವ ದುರ್ಗಮ್ಮನ ಸಿಡಿಬಂಡಿ ಎಳೆಯಲು ಮೆರವಣಿಗೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಗಾಣಿಗ ಸಮಾಜದ ಮುಖಂಡ ಪಂಪಯ್ಯ ಹೇಳಿದರು.