ಸಿರಗುಪ್ಪದ ವಿಶ್ವಜ್ಯೋತಿ ಖಾಸಗಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ಉದ್ಘಾಟಿಸಿದರು.  
ಜಿಲ್ಲೆ

ಕಲೆ ಅನಾವರಣ ಜತೆಗೆ ವಿದ್ಯಾಭ್ಯಾಸವೂ ಮುಖ್ಯ: ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿಕೆ

ಸಿರಗುಪ್ಪ: ಯಶಸ್ಸಿನ ಗುರಿ ಮುಟ್ಟಲು ಕಲೆಯ ಜತೆ ಓದು ಮುಖ್ಯವಾಗಿದ್ದು, ಶಿಕ್ಷಣಕ್ಕೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ನಗರದ ವಿಶ್ವಜ್ಯೋತಿ ಖಾಸಗಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವಿದ್ಯಾರ್ಥಿಗಳಲ್ಲೂ ಅಮೂಲ್ಯವಾದ ಕಲೆ ಅಡಗಿರುತ್ತದೆ. ಅಂತಹ ಕಲೆಗೆ ಪ್ರೋತ್ಸ್ಸಾಹಿಸುವ ಉದ್ದೇಶದಿಂದ ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಕಲೆಯನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸಿ ರಾಜ್ಯ ಮಟ್ಟದಲ್ಲಿ ತಾಲೂಕಿನ ಕೀರ್ತಿಯನ್ನು ಬೆಳಗಿಸಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಸುಲಭವಾಗಿ ಗುರುತಿಸಿ ಶಿಕ್ಷಕರು ಸೂಕ್ತ ಅವರಿಗೆ ತರಬೇತಿ ನೀಡಬೇಕು . ಅಲ್ಲದೆ ಪಾಲಕ, ಪೋಷಕರೂ ಶಿಕ್ಷಕರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ವಿದ್ಯಾರ್ಥಿಗಳು ತಮ್ಮಲ್ಲಿರುವ ಕಲೆಯನ್ನು ಇಡೀ ದೇಶಕ್ಕೆ ಪರಿಚಯಿಸಲು ಸಾಧ್ಯ ಎಂದು ಹೇಳಿದರು. ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾಪಂ ಇಒ ಎಂ.ಬಸಪ್ಪ, ಬಿಇಒ ಪಿ.ಡಿ.ಭಜಂತ್ರಿ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಸುಶೀಲಮ್ಮ ವೆಂಕಟರಾಮರೆಡ್ಡಿ, ಶಾಲೆಯ ಕಾರ್ಯದರ್ಶಿ ಆರ್.ಮಂಗಳಗೌರಿ, ನಿರ್ದೇಶಕ ಆರ್.ವಿವೇಕಾನಂದ, ಸಿಡಿಪಿಒ ಜಲಾಲಪ್ಪ. ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಚನ್ನಬಸವನಗೌಡ, ಬಸವರಾಜಯ್ಯ, ಪಂಪಾಪತಿ, ಯೋಗನಂದಯ್ಯ, ಪ್ರಹಲ್ಲಾದ, ರಮೇಶ ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.