ಸಿರಗುಪ್ಪ: ನಗರದ ಪ್ರಮುಖ ರಸ್ತೆಗಳ ಬೀದಿ ಬದಿಯಲ್ಲಿ ಹಣ್ಣು ಮತ್ತು ಹೂ ಮಾರುವವರನ್ನು ಎಪಿಎಂಸಿಗೆ ಸ್ಥಳಾಂತರಿಸದಂತೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ವಿಶ್ವನಾಥಗೆ ಬೀದಿ ಬದಿ ವ್ಯಾಪಾರಿಗಳು ಬುಧವಾರ ಮನವಿ ಸಲ್ಲಿಸಿದರು.
ವ್ಯಾಪಾರಿ ಪಿ.ರಹೀಂ ಮಾತನಾಡಿ, ನಗರದ ಬಳ್ಳಾರಿ-ಸಿಂಧನೂರು ರಸ್ತೆಯಲ್ಲಿ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ಹಣ್ಣು ಮತ್ತು ಹೂ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕರೊನಾ ಲಾಕ್‌ಡೌನ್‌ನಿಂದ ನಮ್ಮ ಕುಟುಂಬದ ನಿರ್ವಹಣೆ ತುಂಬ ಹದಗೆಟ್ಟಿದೆ. ಇಂತಹ ಸಂದರ್ಭ ನಗರಸಭೆ ನಗರದಿಂದ 2 ಕಿಮೀ ದೂರದಲ್ಲಿರುವ ಎಪಿಎಂಸಿಗೆ ಸ್ಥಳಾಂತರ ಮಾಡಲು ಸೂಚಿಸಿದ್ದಾರೆ. ಜನಸಂದಣಿಯೇ ಇಲ್ಲದ ಅಲ್ಲಿ ಯಾರು ವ್ಯಾಪಾರ ಮಾಡಲು ಬರುವುದಿಲ್ಲ. ಅಲ್ಲಿಗೆ ಹೋಗುವುದರಿಂದ ನಮ್ಮ ಕುಟುಂಬಗಳು ಬೀದಿ ಪಾಲಾಗುತ್ತವೆ. ಈ ದಿಸೆಯಲ್ಲಿ ನಗರದ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಿಗಳಾದ ನೂರ್‌ಬಾಷಾ, ಶಿವು, ಎಂ.ಮಾಬು, ಗಂಗಾಧರ, ದಾದಾ ಖಲಂದರ್, ಜಿ.ವೀರೇಶ, ಮುನ್ನಾ, ಸಾಧಿಕ್, ಸಿ.ಎ.ಸಲಾಂ, ಬಿ.ಉಸ್ಮಾನ್, ಷರೀಫ್, ಇಸ್ಮಾಯಿಲ್, ಚಾಂದ್ ಇದ್ದರು.