ಸಿರಗುಪ್ಪ ತಾಲೂಕಿನ ಅಗಸನೂರು ಗ್ರಾಮದಲ್ಲಿ ಮೊಹರಂ ಹಬ್ಬದ 7ನೇ ದಿನದ ಹಗಲು ಸರಗಸ್ತಿ ಅಂಗವಾಗಿ ಅಲಾಯಿ ಕುಣಿಯಲ್ಲಿ ಬೆಂಕಿಹೊತ್ತಿಸಿರುವುದು. 
ಜಿಲ್ಲೆ

ಮೊಹರಂ ಹಬ್ಬದಲ್ಲಿ ಮಾಂಸ ಸೇವನೆ ನಿಷೇಧ

ಅಗಸನೂರಿನಲ್ಲಿ ತಲೆಮಾರುಗಳಿಂದ ವಿಶಿಷ್ಟ ಆಚರಣೆ ಹಗಲಿನಲ್ಲಿಯೇ ಸರಗಸ್ತಿ ಆಯೋಜನೆ

ಹುಸೇನಿ ನಾಯಕ

ಸಿರಗುಪ್ಪ: ತಾಲೂಕಿನ ಗಡಿಗ್ರಾಮ ಅಗಸನೂರಿನ ಗ್ರಾಮಸ್ಥರು ಮೊಹರಂಅನ್ನು 400 ವರ್ಷಗಳಿಂದ ವಿಶಿಷ್ಟವಾಗಿ ಆಚರಣೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮೊಹರಂ ಗುದ್ದಲಿ ಪೂಜೆ ನಂತರ 10 ದಿನಗಳ ಕಾಲ ಮಾಂಸ ನಿಷೇಧ, ಹೆಣ್ಣು ಮಕ್ಕಳು ಹೂ ಮುಡಿಯುವುದಿಲ್ಲ. ಗ್ರಾಮಸ್ಥರು ಪಾದರಕ್ಷೆ ಧರಿಸುವುದಿಲ್ಲ. ಮಂಚದ ಮೇಲೆ ಮಲಗುವುದಿಲ್ಲ ಮತ್ತು ದಂಪತಿಗಳು ಒಟ್ಟಿಗೆ ಕೂಡುವಂತಿಲ್ಲ. ಈ ಪದ್ಧತಿಗಳನ್ನು ಹಬ್ಬದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ಕೋಮು ಸೌಹಾರ್ದಕ್ಕಾಗಿ ಎಲ್ಲ ಕಡೆಗಳಲ್ಲಿಯೂ 9ನೇ ದಿನ ರಾತ್ರಿ ಸರಗಸ್ತಿ ನಡೆಸುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ ಭಾನುವಾರ 7ನೇ ದಿನ ಸರಗಸ್ತಿಯನ್ನು ಹಗಲಿನಲ್ಲಿಯೇ ಆಚರಿಸುವುದು ವಿಶಿಷ್ಟವಾಗಿದೆ. ಹಗಲು ಸರಗಸ್ತಿಯ ಅಂಗವಾಗಿ ಸೋಮವಾರ ಗ್ರಾಮಸ್ಥರು ಪೀರಲದೇವರ ದರ್ಗಾದ ಹತ್ತಿರ ಅಂಗಳದಲ್ಲಿ ಪೀರಲ ದೇವರ ಕುರಿತಾದ ಮೇಲ್ಪದಗಳನ್ನು ಹಾಡುಗಳನ್ನು ಕೇಳುವುದೇ ಒಂದು ಸೊಗಸು. ಭಕ್ತರು ಕೈಯಲ್ಲಿ ಸಣ್ಣ ಬಿಂದಿಗೆ ಹಿಡಿದು ಹೆಜ್ಜೆ ಹಾಕುತ್ತಾ ಹಾಡುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

ಮಧ್ಯಾಹ್ನದ ನಂತರ ಮಸೀದಿ ಮುಂದೆ ಹಲಗೆ ಬಾರಿಸುತ್ತಾ ಭಕ್ತ ಜನರು ತಂಡೋಪ ತಂಡವಾಗಿ ಅಲಾಯಿ ಕುಣಿಯುತ್ತಾ ಮೈ ಮರೆಯುತ್ತಾರೆ. ಕೈಗಳಲ್ಲಿ ವಿವಿಧ ಬಣ್ಣಗಳ ಧ್ವಜಗಳು ಕಾಣಸಿಗುತ್ತವೆ. 101 ಹಲಗೆ ಬಾರಿಸುವ ವ್ಯಕ್ತಿಗಳ ಸುತ್ತಲೂ ಅಲಾಯಿ ಕುಣಿತದ ಹೆಜ್ಜೆಗಳನ್ನು ಹಾಕುತ್ತಾರೆ.

ಲಿಂಗಾಯತ ಸಮಾಜದ ದೇವರು ಹಿಡಿಯುವ ಬಸಪ್ಪ ತಾತನ ಕುಟುಂಬದ ಸದಸ್ಯ ಶರಬಣ್ಣ ತಾತನನ್ನು ಕರೆತರುವುದುಂಟು. ತಾತನನ್ನು ಖೆಡ್ಡಾ ಬಸ್ತಿಯಿಂದ ಮಸೀದಿಗೆ ಕರೆತರಲು ಮುಂದೆ ಸಾಗಿ ಪುನಃ ಹೊನ್ನಪ್ಪನ ಕಟ್ಟೆಗೆ ಬಂದು ಕಾಯಿ ಕರ್ಪೂರ ಸಲ್ಲಿಸಲಾಗುತ್ತದೆ. ಮಸೀದಿಯಲ್ಲಿದ್ದ ದೇವರುಗಳನ್ನು ಇಬ್ಬರ ಕೈಯಲ್ಲಿ ಕೊಟ್ಟ ನಂತರ ಅಲಾಯಿ ಆಟವಾಡುತ್ತಾ ಪೀರಲ ದೇವರ ಮೆರವಣಿಗೆ ಊರಲ್ಲಿ ಸವಾರಿ ಹೊರಡುತ್ತದೆ. ಗ್ರಾಮದಲ್ಲಿರುವ ಎಲ್ಲ ದೇವಸ್ಥಾನಗಳಿಗೂ ಪೀರಲ ದೇವರು ತೆರಳಿ ಪೂಜೆ ಸಲ್ಲಿಸಿ ನಂತರ ಮಸೀದಿಗೆ ಮರಳಲಾಗುತ್ತದೆ.

ಮೊಹರಂ ಹಬ್ಬದ 3ನೇ ದಿನದಂದು ಅಲಾಯಿ ಕುಣಿಯನ್ನು ತೆಗೆದು ವಿವಿದ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿದ್ದು, 7ನೇ ಸರಗಸ್ತಿಯ ದಿನದವರೆಗೂ ಹೂವಿನ ಅಲಂಕಾರವಿರುತ್ತದೆ.