ಶಿರಾ: ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆರೋಗ್ಯ ಚಿಕಿತ್ಸೆ ಸಿಗುತ್ತಿಲ್ಲ... ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಆಗಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ...ಲಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕಾಮಗಾರಿ, ಕಂಚಿಗಾನಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ತಾಪಂ ಅಧ್ಯಕ್ಷ ಚಂದ್ರಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ಶಿರಾ ತಾಲೂಕು ಗೋಪಾಲದೇವರಹಳ್ಳಿ ಬಡ ಗರ್ಭಿಣಿಗೆ ಹಿಮೋಗ್ಲೋಬಿನ್ ಕಡಿಮೆಯಿದ್ದ ಕಾರಣ ತುಮಕೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅವರು ಅಲ್ಲಿಂದ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲೂ ಬೆಡ್ ಖಾಲಿಇಲ್ಲದೆ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲೂ ಬೆಡ್ ಇಲ್ಲ ಎಂದು ದಾಖಲಾಗದೆ ಆಸ್ಪತ್ರೆಯಲ್ಲೇ ರಾತ್ರಿಯಿಡೀ ಕಾಲ ಕಳೆದು ಬೆಳಗ್ಗೆ ಊರಿಗೆ ವಾಪಸ್ ಮರಳಿರುತ್ತಾರೆ. ಬಿಪಿಎಲ್ ಕಾರ್ಡ್‌ನಿಂದ ಉಚಿತ ಆರೋಗ್ಯ ಚಿಕಿತ್ಸೆ ದೊರಕುವ ರೀತಿ ಇದೇನಾ ಎಂದು ತಾಪಂ ಸದಸ್ಯ ಪುಟ್ಟರಾಜು ಆರೋಗ್ಯಾಧಿಕಾರಿ ಡಾ.ಶ್ರೀನಾಥ್‌ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ.ಶ್ರೀನಾಥ್ ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಮುಂದೆ ಈಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು. ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಆಗಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ, ಹಾಗೂ ಕೊಠಡಿ ಸ್ಚಚ್ಛತೆಗೊಳಿಸುವಲ್ಲಿ ಗಮನ ಹರಿಸುತ್ತಿಲ್ಲ, ಮಕ್ಕಳು ತಾವೇ ಸ್ವಚ್ಛಗೊಳಿಸುತ್ತೇವೆಂದು ಪೊರಕೆ ಕೇಳಿದರೂ ಕೊಡುತ್ತಿಲ್ಲ, ಇದಕ್ಕೆ ಸರ್ಕಾರದಿಂದ ಹಣ ಸಿಗುತ್ತಿಲ್ಲವೇ ಎಂದು ತಾಪಂ ಮಾಜಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಅವರು ಡಾ.ಅಬ್ಜಲ್ ಉರ್ ರೆಹಮಾನ್ ವಿರುದ್ಧ ಹರಿಹಾಯ್ದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಪರಿಶೀಲಿಸುವುದಾಗಿ ತಿಳಿಸಿದರು.
ಜನೌಷಧ ಕೇಂದ್ರ ಆರಂಭಿಸಿ: ಶಿರಾ ಸರ್ಕಾರಿ ಆಸ್ಪತ್ರೆ ಜನೌಷಧಿ ಕೇಂದ್ರ ಮೂರು ತಿಂಗಳಿಂದ ತೆರೆದಿಲ್ಲ. ಮಧ್ಯಮ ವರ್ಗ ಹಾಗೂ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ದೊರಕದೆ ದುಬಾರಿ ಬೆಲೆಯಲ್ಲಿ ಖಾಸಗಿಯವರಿಂದ ಔಷಧ ಖರೀದಿಸುವ ದುಸ್ತಿತಿ ಬಂದೊದಗಿದೆ. ಈ ಕೂಡಲೇ ಜನೌಷಧ ಕೇಂದ್ರ ಪುನರಾರಂಭಿಸುವಂತೆ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥಗೌಡ, ತಾಪಂ ಇಒ ಮೋಹನ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ, ತಾಪಂ ಸದಸ್ಯರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕುಡಿಯುವ ನೀರಿಗೆ ಸಮಸ್ಯೆ:ಶಿರಾ ತಾಲೂಕು ಕಂಚಿಗಾನಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದ್ದು, ಹೊಸದಾಗಿ ಬೋರ್ ಕೊರೆಸಿ ಎಂದು ಸದಸ್ಯರು ಕೇಳಿದಾಗ, ಸರ್ಕಾರದಿಂದ ಹೊಸದಾಗಿ ಬೋರ್ ಕೊರೆಯಲು ಅವಕಾಶವಿಲ್ಲ. ಇರುವ ಹಳೆಯ ಬೋರ್‌ಗಳನ್ನೇ ರೀಬೋರ್ ಮಾಡಬಹುದು ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಹುದು. ಎಲ್ಲಾದರೂ ತೊಂದರೆಯಿದ್ದರೆ ನಮಗೆ ತಿಳಿಸಿ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿ ಮಂಜುನಾಥ್ ಹೇಳಿದರು.