ಜಿಲ್ಲೆ

ಶಿರಾ ನಗರಸಭೆ ಅತಂತ್ರ ; ಕಮಲಕ್ಕೆ ಬರಲಿಲ್ಲ ಶಕ್ತಿ, ‘ಕೈ’ಗೂ ಕೊಂಚ ಹಿನ್ನಡೆ, ಅಸ್ತಿತ್ವ ತೋರಿಸಿದ ಜೆಡಿಎಸ್

Tumakuru

ಶಿರಾ : ಶಿರಾ ನಗರಸಭೆ 30 ಸ್ಥಾನಗಳಿಗೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು 11 ಸ್ಥಾನ ಪಡೆದಿರುವ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೂ ಬಹುಮತಕ್ಕೆ ಅಗತ್ಯವಾದ ಸೀಟುಗಳು ಯಾವ ಪಕ್ಷಕ್ಕೂ ಸಿಗದೇ ಅತಂತ್ರವಾಗಿದೆ.

ಕಾಂಗ್ರೆಸ್ 11, ಜೆಡಿಎಸ್ 7 ಹಾಗೂ ಬಿಜೆಪಿ 4 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ, 8 ಸ್ಥಾನಗಳಲ್ಲಿ ಗೆದ್ದಿರುವ ಪಕ್ಷೇತರರೇ ನಿರ್ಣಾಯಕವಾಗಿದ್ದು ಅಧ್ಯಕ್ಷ ಸ್ಥಾನ ಎಸ್‌ಸಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಾಗಿದೆ.

ವಿಧಾನಸಭೆ ಉಪಚುನಾವಣೆಯಲ್ಲಿ ಅಚ್ಚರಿಯ ಗೆಲುವು ಪಡೆದಿದ್ದ ಬಿಜೆಪಿಗೆ ನಗರಸಭೆಯಲ್ಲಿ ಬಲವಿಲ್ಲ ಎಂಬುದು ದೃಢವಾಗಿದೆ, ಕಳೆದ ಚುನಾವಣೆಯಲ್ಲಿ 15 ಸ್ಥಾನದಲ್ಲಿ ಗೆದ್ದಿದ್ದ ಕಾಂಗ್ರೆಸ್ ಕೂಡ 4 ಸ್ಥಾನ ಕಡಿಮೆಯಾಗಿ 11ಕ್ಕೆ ಕುಸಿದಿದೆ, ಸ್ಥಳೀಯ ನಾಯಕತ್ವ ಕೊರತೆಯ ನಡುವೆಯೂ ಜೆಡಿಎಸ್ 7 ಸ್ಥಾನದಲ್ಲಿ ಗೆಲುವು ಕಂಡಿದೆ.

ಕಳೆದ ಬಾರಿ 5 ಸ್ಥಾನದಲ್ಲಿ ಗೆದ್ದಿದ್ದ ಪಕ್ಷೇತರರು ಈ ಚುನಾವಣೆಯಲ್ಲಿ 8 ಸ್ಥಾನಗಳನ್ನು ಪಡೆದಿದ್ದಾರೆ. ಬಹುಮತಕ್ಕೆ ಪಕ್ಷೇತರರೇ ನಿರ್ಣಾಯಕವಾಗಿದ್ದು ನಗರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಹೆಚ್ಚು ಅವಕಾಶಗಳಿವೆ ಎನ್ನಲಾಗಿದೆ.

21ವಾರ್ಡ್‌ಗೆ ಶೀಘ್ರ ಚುನಾವಣೆ: ಚುನಾವಣೆ ನಡುವೆಯೇ ಹೃದಯಾಘಾತದಿಂದ ಕಾಂಗ್ರೆಸ್ ಅಭ್ಯರ್ಥಿ ಚಾಂದ್‌ಪಾಷ ಮೃತರಾದ ಹಿನ್ನೆಲೆಯಲ್ಲಿ ಮುಂದೂಡಿಕೆಯಾದ ಚುನಾವಣೆ ಶೀಘ್ರದಲ್ಲಿಯೇ ನಡೆಯುವ ಸಾಧ್ಯತೆಯಿದೆ. 31 ವಾರ್ಡ್‌ಗಳ ಪೈಕಿ 30 ವಾರ್ಡ್ ಫಲಿತಾಂಶ ಪ್ರಕಟವಾಗಿದ್ದು ನಗರಸಭೆಯಲ್ಲಿ ಶಾಸಕರು, ಸಂಸದ ಕೂಡ ಮತದಾನದ ಹಕ್ಕು ಹೊಂದಿದ್ದಾರೆ.

ಮೂರು ಮತದ ಅಂತರದಲ್ಲಿ ಮಂದಾರಾಗೆ ಗೆಲುವು! : ಜೆಡಿಎಸ್ ಮುಖಂಡ ಉಗ್ರೇಶ್ ಅವರ ಪುತ್ರಿ ಆರ್.ಮಂದಾರ ಕೇವಲ ಮೂರು ಮತದ ಅಂತರದಲ್ಲಿ ಮೂರನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಎಚ್.ಆರ್.ಶಿವಕುಮಾರ್ ವಿರುದ್ಧ ಮಂದಾರ ಗೆಲುವು ಪಡೆದಿದ್ದಾರೆ. 4ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಆರ್.ತ್ರಿವೇಳಿ ಕೂಡ 6 ಮತದ ಅಂತರದಲ್ಲಿ ಗೆದ್ದಿದ್ದಾರೆ, 9ನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ರವಿಶಂಕರ್ ಕೂಡ ಕೇವಲ 7 ಮತದ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲುಣಿಸಿದ್ದಾರೆ. 19ನೇ ವಾರ್ಡ್‌ನಲ್ಲಿ ಗೆಲುವು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ರುಖೈಯಾ ಪರ್ವಿನ್ ಬರೋಬ್ಬರಿ 779 ಮತಗಳ ಅಂತರದಿಂದ ಗೆಲುವು ಪಡೆದಿದ್ದು ಹೆಚ್ಚು ಅಂತರದ ಗೆಲುವು ಎನಿಸಿಕೊಂಡಿದೆ.

ಮೂವರು ವಾರಗಿತ್ತಿಯರು ಆಯ್ಕೆ : 19ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ರುಖೈಯಾ ಪರ್ವಿನ್, ರೆಹಾನಾಖಾನಂ ಹಾಗೂ 24ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಸಮ್ರಿನ್‌ಖಾನಂ ಆಯ್ಕೆಯಾಗಿದ್ದು ವಾರಗಿತ್ತಿಯರು ನಗರಸಭೆಗೆ ಪ್ರವೇಶ ಪಡೆದಂತಾಗಿದೆ. ಈ ಮೂವರು ನೂತನ ಸದಸ್ಯೆಯರು ನಗರದ ಉಪಕಾರ್ ಗ್ರೂಪ್ ಮಾಲೀಕ ಖಾಸಿಂ ಖಾನ್ ಅವರ ಸೊಸೆಯಂದಿರು.

ಮುಸ್ಲಿಂ ಅಭ್ಯರ್ಥಿಗಳೇ ಹೆಚ್ಚು : 30 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳೇ ಆಯ್ಕೆಯಾಗಿರುವುದು ಶಿರಾ ನಗರಸಭೆ ವಿಶೇಷ ಎನ್ನಿಸಿದೆ. ಪಕ್ಷೇತರರಾಗಿ ಸ್ಫರ್ಧಿಸಿ ಗೆಲುವು ಪಡೆದಿರುವ 8 ಸದಸ್ಯರ ಪೈಕಿ ನಾಲ್ವರು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿದ್ದಾರೆ. ಬಿಸಿಎಂ(ಎ) ಹಾಗೂ ಸಾಮಾನ್ಯ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಇವರು ಯಾವ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದು, ಅಧಿಕಾರ ಹಿಡಿಯಲು ಈ ಸದಸ್ಯರ ಬೆಂಬಲ ಅಗತ್ಯ ಎನಿಸಿದೆ.

15 ದಿನದ ಬಾಣಂತಿಗೂ ಖುಷಿ ತಂದ ಗೆಲುವು : ಶಿರಾ ನಗರಸಭೆ ಚುನಾವಣೆಯಲ್ಲಿ 30ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸ್ವಾತಿ ಮಂಜೇಶ್ 80 ಮತಗಳ ಅಂತರದಿಂದ ಭರ್ಜರಿ ಗೆಲುವು ಪಡೆದಿದ್ದಾರೆ. 15 ದಿನದ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ಸ್ವಾತಿ ಪರವಾಗಿ ಅವರ ಪತಿ ಮಂಜೇಶ್ ವಾರ್ಡ್‌ನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸುಶೀಲಾ ವಿರುದ್ಧ ಸ್ವಾತಿ ಅವರಿಗೆ ಗೆಲುವು ಲಭಿಸಿದ್ದು ಖುಷಿ ಹೆಚ್ಚಿಸಿದೆ.

ಪಕ್ಷೇತರರು ಕಿಂಗ್ ಮೇಕರ್ : ಅತಂತ್ರ ಶಿರಾ ನಗರಸಭೆಯಲ್ಲಿ ಈಗ ಪಕ್ಷೇತರರೇ ಕಿಂಗ್ ಮೇಕರ್‌ಗಳೆನಿಸಿದ್ದಾರೆ. 11 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಅಧಿಕಾರ ಗದ್ದುಗೆಗೇರಲು ಸರಳ ಬಹುಮತಕ್ಕೆ 5 ಸ್ಥಾನಗಳ ಕೊರತೆ ಇದೆ. ಈ ಬಾರಿ 8 ಮಂದಿ ಪಕ್ಷೇತರರ ಗೆದ್ದಿದ್ದು ಇವರಲ್ಲಿ ಐವರು ಮುಸ್ಲಿಂರಿದ್ದಾರೆ. ಹಾಗಾಗಿ, ಕಾಂಗ್ರೆಸ್ ಕೈ ಹಿಡಿಯುವ ಲೆಕ್ಕಾಚರ ಇದೆ. ನಗರಸಭೆ ಅಧ್ಯಕ್ಷ ಸ್ಥಾನ-ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು ಮೂರು ಪಕ್ಷಗಳಲ್ಲಿ ಪರಿಶಿಷ್ಟ ಜಾತಿ ಸದಸ್ಯರಿದ್ದು ಅತಂತ್ರ ನಗರಸಭೆಯಲ್ಲಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಕೆರಳಿಸಿದೆ. ಜೆಡಿಎಸ್ +ಬಿಜೆಪಿ ಜತೆಗೆ ಪಕ್ಷೇತರರು ಕೈಜೋಡಿಸಿದ್ದಲ್ಲಿ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿದ್ದೇ ಆದಲ್ಲಿ ದೋಸ್ತಿ ಆಡಳಿತ ಅಸ್ತಿತ್ವಕ್ಕೆ ಬರಲಿದೆ. ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಯಾವ ರೀತಿ ದಾಳ ಉರುಳಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.