ತುಮಕೂರು: ಶಿರಾ ಶಾಸಕ ಬಿ.ಸತ್ಯನಾರಾಯಣ ಅಕಾಲಿಕ ನಿಧನ ಜಿಲ್ಲೆಯಲ್ಲಿ ಉಪಚುನಾವಣೆಯ ಚರ್ಚೆ ಹುಟ್ಟುಹಾಕಿದೆ. ಹೀಗೆ ಜಿಲ್ಲೆಯ ಇತಿಹಾಸದಲ್ಲಿ ಸಾಕಷ್ಟು ಕಾರಣಕ್ಕೆ ನಡೆದಿರುವ ಉಪಚುನಾವಣೆಗಳಲ್ಲಿ ಅನುಕಂಪ ಗೆದ್ದಿಲ್ಲ ಎಂಬುದು ಸಾಬೀತಾಗಿದೆ.
1969ರಲ್ಲಿ ತಿಪಟೂರು ಕ್ಷೇತ್ರದಲ್ಲಿ ಎಂ.ಎಸ್.ನೀಲಕಂಠಸ್ವಾಮಿ, 1993ರಲ್ಲಿ ಹಾಲಿ ಸಚಿವರಾಗಿದ್ದ ಟಿ.ಎಂ.ಮಂಜುನಾಥ್, 1992ರಲ್ಲಿ ಕುಣಿಗಲ್‌ನಲ್ಲಿ ಕೆ.ಲಕ್ಕಪ್ಪ, 1997ರಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಬಸವಯ್ಯ ಶಾಸಕರಾಗಿದ್ದಾಗ ಅಕಾಲಿಕ ನಿಧನದ ಕಾರಣಕ್ಕೆ ಉಪಚುನಾವಣೆ ನಡೆದಿದೆ.
ಹುಲಿಯೂರು ದುರ್ಗ ಕ್ಷೇತ್ರದಲ್ಲಿಶಾಸಕರಾಗಿದ್ದಾಗಲೇ 2003ರಲ್ಲಿ ವೈ.ಕೆ.ರಾಮಯ್ಯ ನಿಧನರಾಗಿದ್ದರೂ ಸಾರ್ವತ್ರಿಕ ಚುನಾವಣೆ ಹತ್ತಿರದಲ್ಲಿದ್ದ ಕಾರಣಕ್ಕೆ ಉಪಚುನಾವಣೆ ನಡೆಯಲಿಲ್ಲ. ಇನ್ನು 2008ರಲ್ಲಿ ಆಪರೇಷನ್ ಕಮಲದ ಪಾಲಾದ ಜಗ್ಗೇಶ್ ರಾಜೀನಾಮೆಯಿಂದ ತುರುವೇಕೆರೆ ಹಾಗೂ ಡಿ.ಸಿ.ಗೌರಿಶಂಕರ್ ಕಾರಣಕ್ಕೆ ಮಧುಗಿರಿಯಲ್ಲಿ ಉಪಚುನಾವಣೆ ನಡೆದಿತ್ತು. ಈ ವರೆಗೆ ವಿವಿಧ ಕಾರಣಕ್ಕೆ ನಡೆದಿರುವ ಉಪಚುನಾವಣೆಯಲ್ಲಿ ಮೃತ ಶಾಸಕರ ಕುಟುಂಬ ಅಥವಾ ಪಕ್ಷಕ್ಕೆ ಅನುಕಂಪದ ಲಾಭವಾಗಿರುವುದು ಕಡಿಮೆ.
2008ರಲ್ಲಿ ತುರುವೇಕೆರೆಯಲ್ಲಿ ಜಗ್ಗೇಶ್ ಬದಲಾಗಿ ಎಂ.ಡಿ.ಲಕ್ಷ್ಮೀನಾರಾಯಣ, ಮಧುಗಿರಿಯಲ್ಲಿ ಗೌರಿಶಂಕರ್ ಬದಲಾಗಿ ಅವರ ತಂದೆ ಸಿ.ಚನ್ನಿಗಪ್ಪ ಬಿಜೆಪಿಯಿಂದ ಸ್ಪರ್ಧಿಸಿದ್ದರೂ ಅನುಕೂಲವಾಗಲಿಲ್ಲ. ತುರುವೇಕೆರೆಲ್ಲಿ ಎಂ.ಟಿ.ಕೃಷ್ಣಪ್ಪ ಹಾಗೂ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಗೆದ್ದಿದ್ದು ಇತಿಹಾಸ.
ವೈಕೆಆರ್, ಮಂಜುನಾಥ್ ಪತ್ನಿಗೂ ಸಿಗಲಿಲ್ಲ ಗೆಲುವು!: ಹೋರಾಟದ ಮೂಲಕ ಜನನಾಯಕ ಎಂಬ ಖ್ಯಾತಿಗಳಿಸಿದ್ದ ವೈ.ಕೆ.ರಾಮಯ್ಯ ನಿಧನದ ನಂತರ ಉಪಚುನಾವಣೆ ನಡೆಯಲಿಲ್ಲವಾದರೂ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹುಲಿಯೂರುದುರ್ಗ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅನಸೂಯಮ್ಮ ಹಾಗೂ ತಿಪಟೂರು ಕ್ಷೇತ್ರದಲ್ಲಿ ಮಂಜುನಾಥ್ ನಿಧನರಾದ ನಂತರ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅವರ ಪತ್ನಿ ಅನ್ನಪೂರ್ಣ ಅವರಿಗೂ ಅನುಕಂಪ ಕೈಹಿಡಿಯಲಿಲ್ಲ.
1985ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ರ‌್ಯಾಂಕ್ ನಜೀರ್ ರಾಜೀನಾಮೆ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿದ್ದ ಷಫಿಅಹ್ಮದ್ ಗೆದ್ದು ಮೊದಲ ಸಲ ವಿಧಾನಸಭೆ ಪ್ರವೇಶಿಸಿದ್ದರು. ತಂದೆಯ ನಿಧನದ ನಂತರದ 1997ರ ಉಪಚುನಾವಣೆಯಲ್ಲಿ ಸೋತರೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಬದುಕು ಮುಂದುವರಿಸಿರುವ ಸಿ.ಬಿ.ಸುರೇಶ್‌ಬಾಬು ಮೂರು ಬಾರಿ ಶಾಸಕರಾಗಿ ರಾಜಕೀಯದಲ್ಲಿ ಉಳಿದಿದ್ದಾರೆ. ಕುಣಿಗಲ್ ತಾಲೂಕಿನ ಅನುಸೂಯಮ್ಮ ವೈ.ಕೆ.ರಾಮಯ್ಯ ಅವರು ಜಿಪಂ ಸದಸ್ಯರಾಗಿ ಸಕ್ರಿಯ ರಾಜಕೀಯದಲ್ಲಿ ಉಳಿದಿದ್ದಾರೆ.
ಎಸ್ಪಿಎಂ, ಸಿಬಿಎಸ್ ಕೂಡ ಸೋತಿದ್ದರು!: ಕುಣಿಗಲ್ ಕ್ಷೇತ್ರದಲ್ಲಿ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಕೆ.ಲಕ್ಕಪ್ಪ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮೊದಲ ಭಾರಿಗೆ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದರೂ ವೈ.ಕೆ.ರಾಮಯ್ಯ ವಿರುದ್ಧ ಸೋಲು ಕಂಡಿದ್ದರು. 1997ರಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತಮ್ಮ ತಂದೆ ಎನ್.ಬಸವಯ್ಯ ಅಕಾಲಿಕ ನಿಧನದಿಂದ ಎದುರಾದ ಉಪಚುನಾವಣೆಯಲ್ಲಿ ಜನತಾದಳದ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಸಿ.ಬಿ.ಸುರೇಶ್‌ಬಾಬು ಅವರಿಗೆ ಅನುಕಂಪ ಕೈಹಿಡಿದಿರಲಿಲ್ಲ, ಸ್ವತಂತ್ರವಾಗಿ ಕಣಕ್ಕಳಿದು ಜೆ.ಸಿ.ಮಾಧುಸ್ವಾಮಿ ಗೆಲುವು ಸಾಧಿಸಿದ್ದರು. ಹಾಗಾಗಿ, ಜಿಲ್ಲೆಯಲ್ಲಿ ನಡೆದಿರುವ ಉಪಚುನಾವಣೆಗಳಲ್ಲಿ ಅನುಕಂಪ ಗೆಲುವು ತಂದುಕೊಟ್ಟ ಇತಿಹಾಸವಿಲ್ಲ.
ತಿಪಟೂರಿನಲ್ಲಿ ಎರಡು ಬಾರಿ ಹಾಲಿಗಳ ನಿಧನ: ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಹಾಲಿ ಶಾಸಕರು ಮೃತರಾದ ಕೆಟ್ಟ ಇತಿಹಾಸ ದಾಖಲಾಗಿದೆ. 1967ರಲ್ಲಿ ಹಾಲಿ ಶಾಸಕರಾಗಿ ಎಂ.ಎಸ್.ನೀಲಕಂಠಸ್ವಾಮಿ ಹಾಗೂ 1993ರಲ್ಲಿ ಹಾಲಿ ಸಚಿವರಾಗಿದ್ದ ಟಿ.ಎಂ.ಮಂಜುನಾಥ್ ಅಕಾಲಿಕವಾಗಿ ನಿಧನರಾಗಿದ್ದರು.1994ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಅನ್ನಪೂರ್ಣ ಮಂಜುನಾಥ್ ಅವರಿಗೆ ಗೆಲುವು ದಕ್ಕಲಿಲ್ಲ. ಬಿ. ನಂಜಾಮರಿ ಗೆದ್ದು ಶಾಸಕರಾದರು. ಎಂ.ಎಸ್.ನೀಲಕಂಠಸ್ವಾಮಿ ಅವರ ಕುಟುಂಬ ಸದಸ್ಯರು ವಿಧಾನಸಭಾ ಚುನಾವಣೆ ರಾಜಕೀಯಕ್ಕೆ ಬರಲಿಲ್ಲ.