ಶಿರಾ: ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಇಬ್ಬರ ಮಕ್ಕಳು ಸೇರಿ 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮಧುಗಿರಿ ರಸ್ತೆಯ ಪಾರ್ಕ್ ಮೊಹಲ್ಲಾದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಪಾರ್ಕ್ ಮೊಹಲ್ಲಾದ ಗುಲಾಬ್ ಜಾನ್ ಎಂಬುವರ ಮನೆಯಲ್ಲಿ ಬೆಳಗ್ಗೆ 7.30 ರಿಂದ 8 ಗಂಟೆ ಸಮಯದಲ್ಲಿ ಈ ಭಾರೀ ಸ್ಫೋಟ ಸಂಭವಿಸಿದ್ದು ಸ್ಪೋಟದ ತೀವ್ರತೆಗೆ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಸ್ಫೋಟದ ರಭಸಕ್ಕೆ ಮನೆ ಒಡತಿ ಗುಲಾಬ್ ಜಾನ್ (50) ಆಕೆಯ ಮಕ್ಕಳಾದ ಬಾರ್‌ಬೆಂಡರ್ ನದೀಮ್ (32), ವೆಲ್ಡಿಂಗ್ ಕೆಲಸ ಮಾಡುವ ನಿಜಾಮ್ ಖಾನ್ (30) ಹಾಗೂ ಆತನ ಪತ್ನಿ ಸಾದಿಕಾ (27), ಮಕ್ಕಳಾದ ಜಬೀವುಲ್ಲಾ ಖಾನ್ (6), ಅರ್ಷಿಯಾ (5) ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುಲಾಬ್‌ಜಾನ್ ಆಕೆಯ ಮೊಮ್ಮಕ್ಕಳಾದ ಜಬೀವುಲ್ಲಾ ಖಾನ್ ಹಾಗೂ ಅರ್ಷಿಯಾ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಟಿಬಿಜೆ, ಎಸ್ಪಿ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ದೌಡಾಯಿಸಿದ್ದು ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಟಿ.ಬಿ.ಜಯಚಂದ್ರ, ನಗರಸಭಾ ಅಧ್ಯಕ್ಷೆ ಪೂಜಾ, ಸದಸ್ಯ ಜಾಫರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭೇಟಿ ನೀಡಿದರು.
ಭಾರೀ ಸ್ಫೋಟ, ಬೆಚ್ಚಿದ ಶಿರಾ:
ಬೆಳ್ಳಂಬೆಳಗ್ಗೆ ಪಾರ್ಕ್ ಮೊಹಲ್ಲಾದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಇಡೀ ಶಿರಾ ನಗರವೇ ಬೆಚ್ಚಿದ್ದು ನಿಗೂಢ ಸ್ಫೋಟದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ಕ್ಷಣಾರ್ಧದಲ್ಲಿ ಸ್ಫೋಟದ ಬಗ್ಗೆ ‘ಅಂತೆಕಂತೆ’ಗಳ ಸುದ್ದಿಯು ಸ್ಫೋಟಗೊಂಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯ ಶಾಸಕರು ಆದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಹ ಸ್ಥಳಕ್ಕೆ ಬಂದು ಘಟನೆ ಕುರಿತು ಮಾಹಿತಿ ಪಡೆದರು.
ಬಾಂಬ್ ಪತ್ತೆ ದಳ ಮನೆ ಸಂಪೂರ್ಣ ಧ್ವಂಸಗೊಂಡಿದ್ದ ಹಿನ್ನೆಲೆಯಲ್ಲಿ ನಿಗೂಢ ಸ್ಫೋಟ ಎಂಬ ಅನುಮಾನ ಮೂಡಿದ್ದರಿಂದ ಶ್ವಾನದಳದ ಜತೆಗೆ ಬಾಂಬ್ ಪತ್ತೆ ದಳವನ್ನು ಸಹ ಕರೆಸಲಾಯಿತು. ಬಾಂಬ್ ಪತ್ತೆ ದಳ ಸ್ಫೋಟದ ಸಾಕ್ಷೃಗಳ ಜತೆಗೆ ಅಲ್ಲಿ ದೊರೆತ ರಾಸಾಯಿನಿಕ ವಸ್ತುವನ್ನು ಕಲೆಹಾಕಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪಾರ್ಕ್ ಮೊಹಲ್ಲಾ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದು ಇಬ್ಬರು ಮಕ್ಕಳು ಸೇರಿ 6 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಕೆಲವು ಶಂಕೆ ಮೂಡಿದ್ದರಿಂದ ಬಾಂಬ್ ಪತ್ತೆ ದಳವನ್ನು ಸಹ ಕರೆಸಿ ಸಾಕ್ಷೃ ಸಂಗ್ರಹಿಸಿದ್ದು ಅನಿಲ ಸೋರಿಕೆ ಸ್ಫೋಟಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ