ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬೂತ್ ಏಜೆಂಟ್‌ಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ತಾಪಂನಲ್ಲಿ ನಡೆದ ಎಸ್‌ಐಆರ್ ತರಬೇತಿ ಕಾರ್ಯಾಗಾರದಲ್ಲಿ ಪ್ರಶಾಂತ್ ನಾಯಕ್ ಮಾತನಾಡಿದರು. ಡಾ.ಹರಿಪ್ರಸಾದ್ ಇತರರು ಇದ್ದರು.
- ಎಸ್‌ಐಆರ್ ತರಬೇತಿ ಕಾರ್ಯಾಗಾರದಲ್ಲಿ ಪ್ರಶಾಂತ್ ನಾಯಕ್ ಮಾಹಿತಿ
ಪುತ್ತೂರು: ದೇಶದಲ್ಲಿ ಮತದಾರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆ ೨೦೦೨ರಲ್ಲಿ ನಡೆದಿದ್ದು, ಬಳಿಕ ಪ್ರತಿ ವರ್ಷ ಪರಿಷ್ಕರಣೆ ಮಾಡಲಾಗಿದೆ. ಎರಡು ಕಡೆಗಳಲ್ಲಿ, ಎರಡು ರಾಜ್ಯದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತಿದೆ. ದೇಶದ ನೈಜ ಮತದಾರರಿಗೆ ಎಸ್‌ಐಆರ್‌ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ತಂದೆಯ ಹೆಸರು, ತಾಯಿಯ ಹೆಸರು ಇಲ್ಲದಿದ್ದರೆ ಮಾತ್ರ ದಾಖಲೆಗಳನ್ನು ನೀಡಬೇಕು. ಪಟ್ಟಿಯಲ್ಲಿನ ಹೆಸರಿನ ಬಗ್ಗೆ ಆಕ್ಷೇಪಣೆಗಳಿದ್ದರೂ ಸೂಚಿತ ದಾಖಲೆಯನ್ನು ನೀಡಬೇಕಾಗಿದೆ. ಸೂಕ್ತ ದಾಖಲೆ ನೀಡಿದರೆ ಮುಂದೆ ಸೇರ್ಪಡೆಗೆ ಅವಕಾಶವಿದೆ ಎಂದು ತಾಲೂಕುಮಟ್ಟದ ತರಬೇತುದಾರ ಪ್ರಶಾಂತ್ ನಾಯಕ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬೂತ್ ಏಜೆಂಟ್‌ಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮತಾನಾಡಿದರು.
ಬಿಎಲ್‌ಒಗಳು ನೀಡುವ ಅರ್ಜಿಯ ಸಂದರ್ಭ ಯಾವ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆಯಿಲ್ಲ. ಆಕ್ಷೇಪಗಳಿದ್ದರೆ ಹಾಗೂ ೨೦೦೨ರ ಪಟ್ಟಿಯಲ್ಲಿ ಹೆಸರು ಹೊಂದಾಣಿಕೆಯಾಗದ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಅಂಥ ಸಂದರ್ಭದಲ್ಲಿ ಸೂಚಿತ ೧೨ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಬೇಕು. ಮತದಾರರ ಹೆಸರು ತೆಗೆಯುವಾಗ ಗೊಂದಲ ಆಗಬಾರದೆಂಬ ಕಾರಣಕ್ಕೆ ಎಲ್ಲ ಪಕ್ಷದ ಬೂತ್ ಏಜೆಂಟ್‌ಗಳೂ ಸಹಿ ಮಾಡಬೇಕಾಗಿದೆ. ಆರೋಗ್ಯ ಸಮಸ್ಯೆಯಾದ ಬಿಎಲ್‌ಒಗಳನ್ನು ಕೈ ಬಿಡಲು ಅವಕಾಶವಿಲ್ಲ. ಮಾನವೀಯತೆಯ ನೆಲೆಯಲ್ಲಿ ಸರ್ಕಾರಿ ಇಲಾಖೆಯ ಅಽಕಾರಿಗಳನ್ನು ಬಳಸಬಹುದು. ಕಾಯಂ ವಾಸ ಸ್ಥಳದ ದಾಖಲೆಯನ್ನು ತಹಸೀಲ್ದಾರರು ಅಥವಾ ಅದಕ್ಕಿಂತ ಮೇಲಿನ ಹಂತದ ಅಽಕಾರಿಗಳೇ ನೀಡಬೇಕು. ಮನೆಯಲ್ಲಿ ಇಲ್ಲದ ವ್ಯಕ್ತಿಯ ಪರವಾಗಿ ಮನೆಯವರು ಅರ್ಜಿಯನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ ಎಂದರು.
ತರಬೇತಿದಾರರಾದ ರಾಮ ಕೆ., ಡಾ.ನಂದೀಶ್ ವೈ.ಡಿ., ಚುನಾವಣಾ ಶಾಖೆಯ ಸುಲೋಚನಾ, ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.
ಶೇ.೯೪ರಷ್ಟು ಮ್ಯಾಪಿಂಗ್ ಪೂರ್ಣ
ತಾಲೂಕುಮಟ್ಟದ ತರಬೇತುದಾರ ಡಾ.ಹರಿಪ್ರಸಾದ್ ಮಾತನಾಡಿ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಶೇ.೯೪ರಷ್ಟು ಪೂರ್ಣಗೊಳಿಸಲಾಗಿದೆ. ಮುಂದಿನ ಜು.೨೭ರ ವರೆಗೆ ಮ್ಯಾಪಿಂಗ್ ಮಾಡಲು ಅವಕಾಶ ನೀಡಲಾಗಿದೆ. ಬಿಎಲ್‌ಒಗಳ ಮನೆ ಭೇಟಿ ಜೂ.೩೦ರಿಂದ ಜುಲೈ ೨೯ರ ತನಕ ನಡೆಯಲಿದ್ದು, ಕರಡು ಮತದಾರರ ಪಟ್ಟಿ ಪ್ರಕಟಣೆ ಆ.೫ರಂದು ನಡೆಯಲಿದೆ. ಬಳಿಕ ಸೆ.೯ರವರೆಗೆ ಹಕ್ಕು ಮತ್ತು ಆಕ್ಷೇಪಗಳ ಸಲ್ಲಿಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ ೩ರವರೆಗೆ ನೋಟಿಸ್ ಹಂತ ಹಾಗೂ ಇತ್ಯರ್ಥಕ್ಕೆ ಸಮಯ ನಿಗದಿಯಾಗಿದ್ದು, ಅಕ್ಟೋಬರ್ ೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ವ್ಯಕ್ತಿಗೆ ದೇಶದಲ್ಲಿ ಒಂದೇ ಮತ ಇರಬೇಕೆಂಬ ನಿಟ್ಟಿನಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಬೀಗ ಹಾಕಿದ ಮನೆಗಳಿಗೆ ಮೂರು ಬಾರಿ ಬಿಎಲ್‌ಒ ಭೇಟಿ ಮಾಡಲಿದ್ದು, ಮನೆಯಲ್ಲಿ ಇಲ್ಲದಿದ್ದರೆ ಮುಂದಿನ ಪ್ರಕ್ರಿಯೆಗೆ ಹೋಗುತ್ತಾರೆ ಎಂದು ತಿಳಿಸಿದರು.
ತರಬೇತಿಗೆ ಇಬ್ಬರೇ ಹಾಜರು
ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ತಲಾ ಇಬ್ಬರು ಮಾತ್ರ ಭಾಗವಹಿಸಿದ್ದರು. ಈ ಬಗ್ಗೆ ಪಕ್ಷದವರಲ್ಲಿ ಮಾಹಿತಿ ಕೇಳಿದಾಗ ಯಾರೊಬ್ಬರಿಗೂ ಸಭೆಯ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.