ಜಿಲ್ಲೆ

ನಾಡಿಗೆ ಸರ್ ಎಂ.ವಿ ಕೊಡುಗೆ ಅವಿಸ್ಮರಣೀಯ: ಶಿಕ್ಷಕ ಆರ್.ಜಿ.ಮಹದೇವಸ್ವಾಮಿ ಅಭಿಮತ

reportermys

ಮಳವಳ್ಳಿ: ಕರುನಾಡಿಗೆ ಸರ್.ಎಂ.ವಿಶ್ವೇರಯ್ಯ ಅವರ ಕೊಡುಗೆಗಳು ಅವಿಸ್ಮರಣೀಯವಾಗಿದ್ದು, ಇಂದಿನ ಯುವ ಪೀಳಿಗೆ ಅವರ ಆದರ್ಶಗಳನ್ನು ಅನುಸರಿಸುವುದರಿಂದ ದೇಶದ ಪ್ರಜ್ಞಾವಂತ ಪ್ರಜೆಗಳಾಗಿ ಹೊರ ಹೊಮ್ಮಬಹುದು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಆರ್.ಜಿ.ಮಹದೇವಸ್ವಾಮಿ ತಿಳಿಸಿದರು.

ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಎಪಿಜೆ ಅಬ್ದುಲ್ ಕಲಾಂ ಗ್ರಾಮೀಣ ವಿಜ್ಞಾನ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸರ್ ಎಂ.ವಿ. ಜನ್ಮದಿನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಸಿ.ವಿ.ರಾಮನ್ ಸೇರಿದಂತೆ ಹಲವಾರು ಮಹನೀಯರು ಇಂದಿನ ನಮ್ಮ ದೇಶದ ವೈಜ್ಞಾನಿಕ ಬೆಳವಣಿಗೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಶೈಕ್ಷಣಿಕ ದಿನಗಳಲ್ಲಿ ಇಂತಹ ಮಹಾನ್ ಸಾಧಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವುದರಿಂದ ಕಲಿಕೆಯಲ್ಲಿ ಜಾಗೃತಿ ಹಾಗೂ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಶೈಕ್ಷಣಿಕ ದಾನಿ ರೋಟೇರಿಯನ್ ಸೋಮಶೇಖರ್ ಹಲವು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಹಕಾರಕ್ಕಾಗಿ ದತ್ತು ಪಡೆದು ಮಾತನಾಡಿದರು.

ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಮಾಯಿಗೌಡ ಅವರನ್ನು ಅಭಿನಂದಿಸಲಾಯಿತು. ಪ್ರಗತಿಪರ ರೈತ ಗಜೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಮಹೇಶ್, ಮುಖ್ಯ ಶಿಕ್ಷಕ ಶಿವಣ್ಣ, ಸಹ ಶಿಕ್ಷಕರಾದ ಬಸವರಾಜು, ನಾಗರಾಜಾಚಾರಿ, ಅಣ್ಣಯ್ಯ, ಸಿದ್ದೇಗೌಡ, ಜಯಮ್ಮ, ಸುನಂದಾ ಇದ್ದರು.