ಜಿಲ್ಲೆ

ಸರ್‌ಎಂ.ವಿಶ್ವೇಶ್ವರಯ್ಯ ನವಭಾರತದ ಭಾಗ್ಯಶಿಲ್ಪಿ

ತುಮಕೂರು: ಸರ್.ಎಂ.ವಿಶ್ವೇಶ್ವರಯ್ಯ ಅವರಲ್ಲಿದ್ದ ಪ್ರಾಮಾಣಿಕತೆ ಹಾಗೂ ಸ್ವಾಭಿಮಾನ ಇಂದಿನ ಇಂಜಿನಿಯರ್‌ಗಳಿಗೆ ಮಾದರಿಯಾಗಬೇಕು, ಇಂಜಿನಿಯರ್‌ಗಳು ಹಣದ ಹಿಂದೆ ಬಿದ್ದರೆ ದೇಶದ ಅಭಿವೃದ್ಧಿಗೆ ಮಾರಕ ಎಂದು ಎಂಪ್ರೆಸ್ ಸರ್ಕಾರಿ ಕಾಲೇಜು ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.

ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಇಂಜಿನಿಯರ್ಸ್‌ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರನ್ನು ಇಂಜಿನಿಯರ್ ದಿನಾರಚಣೆಯಂದು ಸ್ಮರಿಸಿದಷ್ಟೇ ಅವರ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದರು.

ವಿಶ್ವೇಶ್ವರಯ್ಯ ಅವರು ತಾಂತ್ರಿಕತೆಯಲ್ಲಿ ಅಷ್ಟೇ ಅಲ್ಲದೆ ಆಡಳಿತಾತ್ಮಕವಾಗಿಯೂ ಯಶಸ್ವಿಯಾಗಿದ್ದು, ನಾಡಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ, ನವಭಾರತದ ಭಾಗ್ಯಶಿಲ್ಪಿಯಾಗಿದ್ದಾರೆ ಎಂದು ಸ್ಮರಿಸಿದರು.

ಸರ್.ಎಂ.ವಿಶ್ವೇಶ್ವರಯ್ಯ ವಿದ್ಯಾ ಕ್ಷೇತ್ರದಲ್ಲೂ ಕೆಲಸ ಮಾಡಿ, ಹಲವಾರು ಇಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, ಐಟಿಐಗಳಂತಹ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಹಲವು ಪ್ರತಿಭಾವಂತರಿಗೆ ದಾರಿದೀಪರಾಗಿದ್ದಾರೆ ಎಂದರು.

ಕಾರ್ಯಪಾಲಕ ಅಭಿಯಂತರ ಸಂಜೀವರಾಜು ಮಾತನಾಡಿ, ಸರ್.ಎಂ.ವಿ.ಅವರು ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡು ಕೆಳವರ್ಗದ, ಶೋಷಿತ ವರ್ಗದ ಒಳಿತಿಗಾಗಿ ವಿದ್ಯಾಭ್ಯಾಸವನ್ನೇ ಮೊದಲ ಅಸ್ತ್ರ ಎಂಬ ನಿಲುವಿನೊಂದಿಗೆ ಪ್ರಾಥಮಿಕ ಶಿಕ್ಷಣವನ್ನು ಪ್ರಪ್ರಥಮವಾಗಿ ಭಾರತ ದೇಶದಲ್ಲಿ ತಂದಂತಹ ಕೊಡುಗೆ ನಮ್ಮ ಹೆಮ್ಮೆ ಎಂದು ಹೇಳಿದರು.

ವಿದ್ಯಾಭ್ಯಾಸದಲ್ಲಿ ಹೆಣ್ಣುಮಕ್ಕಳು ಆದ್ಯತೆ ಮೇರೆಗೆ ಅವರು ತೊಡಗಿಸಿಕೊಳ್ಳುವಂತಹ ಕಾರ್ಯಕ್ರಮವನ್ನು ಈ ದೇಶದಲ್ಲಿ ತಂದುಕೊಟ್ಟವರು ಸರ್.ಎಂ.ವಿಶ್ವೇಶ್ವರಯ್ಯನವರಾಗಿದ್ದು, ಅವರ ಸಾಧನೆ ಆಡು ಮುಟ್ಟದ ಸೊಪ್ಪಿನಂತೆ ಎಲ್ಲ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದರು ಎಂದು ಸ್ಮರಿಸಿದರು. ಹಿಂದೂಸ್ಥಾನ್ ಏರೋನಾಟಿಕ್ ಸಂಸ್ಥೆ, ಸ್ಟೇಟ್‌ಬ್ಯಾಂಕ್ ಆಫ್ ಮೈಸೂರ್, ಭದ್ರಾವತಿಯ ಉಕ್ಕಿನ ಕಾರ್ಖಾನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದರು.

ನಿವೃತ್ತ ಇಂಜಿನಿಯರ್ ರವಿಶಂಕರ್ ಮಾತನಾಡಿ, ವಿಶ್ವದ ಗಮನ ಸೆಳೆದಿರುವ ಕೃಷ್ಣರಾಜಸಾಗರ ಆಣೆಕಟ್ಟೆಯನ್ನು ನಿರ್ಮಿಸಿ, ಆ ಭಾಗದ ರೈತರು ಹಾಗೂ ಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿಯತ್ತ ಸಾಗಲು ಸರ್ ಎಂ.ವಿಶ್ವೇಶ್ವರಯ್ಯನವರು ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸಿ ಆ ಭಾಗದ ಜನತೆಗೆ ಆಶಾ ಜ್ಯೋತಿಯಾಗಿದ್ದಾರೆ ಎಂದರು.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಚ್.ಬಿ.ಮಲ್ಲೇಶ್, ರವಿಶಂಕರ್ ಹಾಗೂ ಹಾಲಿ ಇಂಜಿನಿಯರ್ ಸಿದ್ದಪ್ಪ ಅವರನ್ನು ಗೌರವಿಸಲಾಯಿತು. ಕಾರ್ಯಪಾಲಕ ಇಂಜಿನಿಯರ್ ಮೋಹನ್‌ಕುಮಾರ್, ಆನಂದ್‌ಕುಮಾರ್ ಇದ್ದರು.

ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಇಂಜಿನಿಯರ್‌ಗಳು ವಿಶ್ವೇಶ್ವರಯ್ಯ ಅವರಷ್ಟೇ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು, ಸರ್ಕಾರದ ಹಣವನ್ನು ಸದುಪಯೋಗ ಮಾಡುವ ಹೊಣೆಗಾರಿಕೆ ಮರೆಯಬಾರದು. ಕೆ.ಎಸ್.ಸಿದ್ದಲಿಂಗಪ್ಪ ಪ್ರಾಚಾರ್ಯ