- ಕೆಪಿಸಿಸಿ ವತಿಯಿಂದ ಆಯೋಜನೆ
- ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್
ಮಂಗಳೂರು: ಕೆಪಿಸಿಸಿ ವತಿಯಿಂದ ಜೂ. 23ರಂದು ಮಂಗಳೂರಿನ ಪುರಭವನದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಾಗೃತಿ ಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.
ಶನಿವಾರ ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಅವರು, "ನಮ್ಮ ನಡೆ ಮತ ರಕ್ಷಣೆಯ ಕಡೆ" ಎನ್ನುವ ಧೇಯವಾಕ್ಯದೊಂದಿಗೆ ಐದು ಬೇರೆ ಬೇರೆ ವಿಭಾಗಗಳಲ್ಲಿ ಈ ಸಮಾವೇಶ ನಡೆಯಲಿದ್ದು, 23ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಈ ಸಮಾವೇಶದಲ್ಲಿ ಚಿಕ್ಕಮಗಳೂರು, ಉ.ಕ., ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೂತ್ ಲೆವೆಲ್ ಆಫೀಸರ್ಸ್ (ಬಿಎಲ್‌ಒ) ಮತ್ತು ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಎ) ಅವರು ಭಾಗವಹಿಸಲಿದ್ದಾರೆ. ಅವರಿಗೆ ನಮ್ಮ ನಾಯಕರು, ಸಂಪನ್ಮೂಲ ವ್ಯಕ್ತಿಗಳು ತರಬೇತಿಯ ಮೂಲಕ ಮಾಹಿತಿ ನೀಡಲಿದ್ದಾರೆ. ಮುಖಂಡ ವಿ.ಆರ್. ಸುದರ್ಶನ್ ಅವರ ಉಸ್ತುವಾರಿಯಲ್ಲಿ ಈ ಸಮಾವೇಶ ನಡೆಯಲಿದ್ದು, ಸಿಎಂ, ಡಿಸಿಎಂ, ಮಾಜಿ ಸಿಎಂ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಉನ್ನತ ಮಟ್ಟದ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಮತದಾರರಿಗೆ ಮಾಹಿತಿಯ ಕೊರತೆ
ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಅವರು ಮಾತನಾಡಿ, ಎಸ್‌ಐಆರ್ ಕುರಿತು ಚುನಾವಣಾ ಆಯೋಗ, ಅಧಿಕಾರಿಗಳು ಮತದಾರ ಜನರಿಗೆ ಸರಿಯಾದ ಮಾಹಿತಿಯನ್ನೇ ನೀಡಿಲ್ಲ. ಈ ಕಾರಣದಿಂದಲೇ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರಿ ಸಂಖ್ಯೆಯ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜಾಗೃತಿ ಸಮಾವೇಶದ ಮೂಲಕ ಮತ ವಂಚನೆಯಾಗದಂತೆ ಕ್ರಮ ವಹಿಸಲಾಗುವುದು. ಮುಂದಕ್ಕೆ ಜಿಲ್ಲೆ, ತಾಲೂಕು, ವಿಭಾಗ ಮಟ್ಟದಲ್ಲೂ ಸಮಾವೇಶ ಹಮ್ಮಿಕೊಳ್ಳಲಾಗುವುದು. ಮಾಹಿತಿಯ ಕೊರತೆಯಿಂದ ಈ ವ್ಯವಸ್ಥೆಯ ಮೇಲೆ ಜನ ನಂಬಿಕೆ ಕಳೆದುಕೊಳ್ಳುವಂತೆ ಆಗಬಾರದು. ಇಲ್ಲಿ ಅಧಿಕಾರಿಗಳ ವಿಫಲತೆಯೇ ಗೊಂದಲಗಳಿಗೆ ಮುಖ್ಯ ಕಾರಣವಾಯಿತು ಎಂದು ಹೇಳಿದ ಅವರು, ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಮಾಹಿತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ರೂಪ
ಕರಾವಳಿ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿಯ ಪ್ರವಾಸೋದ್ಯಮ ಕುರಿತಂತೆ ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯನ್ನು ಕರೆಯುವುದಾಗಿ ಹೇಳಿದ್ದಾರೆ. ಈ ಮೂಲಕ ಕರಾವಳಿ ಪ್ರವಾಸೋದ್ಯಮ ಹೊಸ ರೂಪ ಸಿಗಲಿದೆ. ಬಂಡವಾಳ ಹೂಡಿಕೆದಾರರಿಗೆ ಸಬ್ಸಿಡಿ ನೀಡಿ ಉತ್ತೇಜಿಸಲು ಮುಂದಾಗಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ಪದ್ಮರಾಜ್ ಪೂಜಾರಿ, ಬಿ.ಕೆ. ಸಲೀಂ, ಪ್ರಕಾಶ್ ಸಾಲಿಯಾನ್, ವಿಕಾಸ್ ಶೆಟ್ಟಿ, ಜೋಕಿಮ್ ಡಿಸೋಜ, ಇಬ್ರಾಹಿಂ ನವಾಜ್, ನಝೀರ್ ಬಜಾಲ್ ಅವರು ಸುದ್ದಿಗೋಷ್ಠಿಯಲ್ಲಿದ್ದರು.