ಜಿಲ್ಲೆ

ಪೀಣ್ಯ ಕೈಗಾರಿಕೆ ಪ್ರದೇಶಕ್ಕೆ ಎಸ್‌ಐಆರ್ ಮಾನ್ಯತೆ ಬಲ

ಆರ್​​.ತುಳಸಿಕುಮಾರ್​ ಬೆಂಗಳೂರು

ದೇಶದ ಯಂತ್ರೋಪಕರಣ (ಮಷೀನ್ ಟೂಲ್ಸ್) ಕ್ಷೇತ್ರಕ್ಕೆ ಶೇ.45 ಕೊಡುಗೆ ನೀಡುತ್ತಿರುವ ಪೀಣ್ಯ ಕೈಗಾರಿಕೆ ಪ್ರದೇಶಕ್ಕೆ ವಿಶೇಷ ಹೂಡಿಕೆ ವಲಯ (ಎಸ್‌ಐಆರ್) ಸ್ಥಾನಮಾನ ನೀಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಉದ್ಯಮ ವಲಯ ಮುಕ್ತಕಂಠದಿಂದ ಸ್ವಾಗತಿಸಿದೆ. ಈ ಎಸ್‌ಐಆರ್ ವ್ಯಾಪ್ತಿಯಲ್ಲಿ ಕಾಲಮಿತಿಯೊಳಗೆ ಪೂರ್ಣ ಪ್ರಮಾಣದ ಮೂಲಸೌಕರ್ಯ ಕಲ್ಪಿಸಿದರೆ ಉದ್ಯೋಗಾವಕಾಶ ಹೆಚ್ಚಳದ ಜತೆಗೆ ಆರ್ಥಿಕತೆಗೆ ಇನ್ನಷ್ಟು ಕಾಣಿಕೆ ನಿರೀಕ್ಷಿಸಬಹುದಾಗಿದೆ.

ಏಷ್ಯಾದ ಅತಿದೊಡ್ಡ ಕೈಗಾರಿಕೆ ಪ್ರದೇಶವೆಂದು ಖ್ಯಾತಿ ಪಡೆದಿರುವ ಪೀಣ್ಯ ಇಂಡಸ್ಟ್ರೀಯಲ್ ಎಸ್ಟೇಟ್‌ಗೆ ಎಸ್‌ಐಆರ್ ಮಾನ್ಯತೆಯು ಸಣ್ಣ ಕೈಗಾರಿಕೆ ವಲಯವನ್ನು ಮತ್ತಷ್ಟು ಎತ್ತರಕ್ಕೆ ಏರಲು ವೇದಿಕೆ ಕಲ್ಪಿಸಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಲ್ಲಿ ಭಾರತದಲ್ಲೇ ಬೃಹತ್ ಕೈಗಾರಿಕೆ ಹಬ್ ಆಗಿ ಬೆಳೆವಣಿಗೆ ಸಾಧಿಸಬಹುದು. ಇದಕ್ಕಾಗಿ ಈಗಲೇ ಪೂರ್ಣ ಪ್ರಮಾಣದ ಕೈಗಾರಿಕೆ ಟೌನ್‌ಶಿಪ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನೀಲಿನಕ್ಷೆ ಸಿದ್ಧಪಡಿಸುವುದು ಸೂಕ್ತ ಎಂಬ ಸಲಹೆಯನ್ನು ಕೈಗಾರಿಕೋದ್ಯಮಿಗಳು ಸರ್ಕಾರದ ಮುಂದಿಟ್ಟಿದೆ.

ಪ್ರಸ್ತುತ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ 3,500ಕ್ಕೂ ಹೆಚ್ಚು ಘಟಕಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ 8.5 ಲಕ್ಷಕ್ಕೂ ಅಧಿಕ ಕಾರ್ಮಿಕರು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಯಂತ್ರೋಪಕರಣ, ವಾಹನ ಬಿಡಿ ಭಾಗಗಳು, ಏರೋಸ್ಪೇಸ್ ಕ್ಷೇತ್ರದ ಸೂಕ್ಷ್ಮ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ಆದರೆ, ಕೈಗಾರಿಕಾ ಘಟಕಗಳು ವ್ಯವಸ್ಥಿತವಾಗಿ ಕಾರ್ಯಾಚರಿಸಲು ಸೂಕ್ತ ಮೂಲಸೌಕರ್ಯವೇ ಇಲ್ಲ. ಕೆಲವೆಡೆ ಮಾತ್ರ ಓಡಾಡುವಂತಹ ರಸ್ತೆಗಳಿವೆ. ಚರಂಡಿ, ಒಳಚರಂಡಿ, ಮಳೆಗಾಲುವೆ ಸೌಕರ್ಯ ಅಷ್ಟಕಷ್ಟೆ. ತ್ಯಾಜ್ಯ ಸಂಗ್ರಹ/ವಿಲೇವಾರಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಮುಖ್ಯವಾಗಿ ಈ ಪ್ರದೇಶವು ತಲಾ ಇಬ್ಬರು ಶಾಸಕರು, ಸಂಸದರು ಹಾಗೂ 6 ವಾರ್ಡ್ ಕಾರ್ಪೊರೇಟರ್‌ಗಳ ವ್ಯಾಪ್ತಿಯಲ್ಲಿ ಬರುತ್ತಿದ್ದ ಕಾರಣ ಸಮನ್ವಯ ಸಾಧಿಸಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ.

ತೆರಿಗೆ ಪಾವತಿಸಿದರೂ ಸೌಕರ್ಯ ಇಲ್ಲ:

ಇಂತಹ ಸಮಸ್ಯೆಯಿಂದಾಗಿ ಪೀಣ್ಯ ಕೈಗಾರಿಕೆ ಪ್ರದೇಶವು ಟೌನ್‌ಶಿಪ್ ಆಗಿ ಬೆಳೆವಣಿಗೆ ಹೊಂದಲು ಸಾಧ್ಯವಾಗಿಲ್ಲ. ಘಟಕಗಳಿಂದ ಆಸ್ತಿತೆರಿಗೆ ಸೇರಿ ಇನ್ನಿತರ ಶುಲ್ಕ ಸ್ಥಳೀಯ ಸಂಸ್ಥೆ, ಸರ್ಕಾರಕ್ಕೆ ಪಾವತಿಸುತ್ತಿದ್ದರೂ, ಸೌಕರ್ಯ ಕಲ್ಪಿಸುವ ಕೆಲಸ ಆಗಿಲ್ಲ. ಹೀಗಾಗಿ ಇಲ್ಲಿ ಉತ್ಪಾದಿಸಲಾಗುವು ಉತ್ಪನ್ನವನ್ನು ಸಾಗಿಸಲು ಹರಸಾಹಸ ಮಾಡಬೇಕಿದೆ. ಈ ಪರಿಸ್ಥಿತಿಯನ್ನು ಅರಿತು ಹೊರಗಿನ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡುವುದಿರಲಿ, ಘಟಕ ಸ್ಥಾಪಿಸಲು ಹಿಂದೇಟು ಹಾಕುವ ಸ್ಥಿತಿ ಇದೆ.

ಎಸ್‌ಐಆರ್‌ನಿಂದ ಹೊಸ ಆಶಾಕಿರಣ:

ವಿಶೇಷ ಹೂಡಿಕೆ ವಲಯದ ನಿರ್ವಹಣೆಯ ಹೊಣೆ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವಾಗಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಹಿಸಿಕೊಳ್ಳಲಿದೆ. ಇಲ್ಲಿ ಸಂಗ್ರಹವಾಗುವ ಆಸ್ತಿತೆರಿಗೆಯ ಶೇ.70 ಹಣವನ್ನು ಈ ಪ್ರದೇಶದಲ್ಲೇ ಮೂಲಸೌಕರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಉಳಿದ ಶೇ.30 ಪಾಲಿಕೆಗೆ ಹಸ್ತಾಂತರವಾಗುತ್ತದೆ. ಜತೆಗೆ ಟೌನ್‌ಶಿಪ್ ಆಗಿ ಬದಲಾವಣೆ ಕಂಡಲ್ಲಿ ಹೆಚ್ಚಿನ ತೆರಿಗೆ ಪಾವತಿಸಲು ಉದ್ಯಮಿಗಳು ಸಿದ್ಧರಿದ್ದಾರೆ. ಈ ಹಣವನ್ನು ಕ್ರೊಡೀಕರಿಸಿ ಪಾರದರ್ಶಕ ರೀತಿಯಲ್ಲಿ ವೆಚ್ಚ ಮಾಡಿದ್ದಲ್ಲಿ ಕಾಲಮಿತಿಯೊಳಗೆ ಸಕಲ ಮೂಲಸೌಕರ್ಯ ಲಭ್ಯವಾಗಲಿದೆ. ಇಂತಹ ಕಾರ್ಯ ಈಗಾಗಲೇ ಇಲೆಕ್ಟ್ರಾನಿಕ್ಸ್ ಸಿಟಿ ಟೌನ್‌ಶಿಪ್‌ನಲ್ಲಿ ಯಶಸ್ಸು ಕಂಡಿದ್ದು, ನಮ್ಮಲ್ಲೂ ಅದೇ ಮಾದರಿಯ ಅಭಿವೃದ್ಧಿ ಆಗಬಹುದು ಎಂಬ ಆಶಾಭಾವ ಪೀಣ್ಯ ಕೈಗಾರಿಕೋದ್ಯಮಿಗಳಿಂದ ವ್ಯಕ್ತವಾಗಿದೆ.

1,416 ಎಕರೆ ಪ್ರದೇಶಕ್ಕೆ ಎಸ್‌ಐಆರ್ ಮಾನ್ಯತೆ:

ಎಸ್‌ಐಆರ್ ವ್ಯಾಪ್ತಿಗೆ ಪೀಣ್ಯ 1, 2, 3 ಹಾಗೂ 4ನೇ ಹಂತದ ಕೈಗಾರಿಕೆ ಪ್ರದೇಶವು ಒಳಪಡಲಿದೆ. ಈ ಭಾಗದ ಲಗ್ಗೆರೆ, ಪೀಣ್ಯ, ಚೊಕ್ಕಸಂದ್ರ, ನೆಲಗೆದರನಹಳ್ಳಿಗೆ ಸೇರಿದ ವಿವಿಧ ಸರ್ವೆ ನಂಬರ್‌ಗಳ ಜಮೀನಿನಲ್ಲಿ ಕೈಗಾರಿಕೆ ಪ್ರದೇಶವು ಹರಡಿಕೊಂಡಿದೆ. ಸರ್ಕಾರ ಈಗ 1,416.46 ಎಕರೆ ವಿಸ್ತೀರ್ಣಕ್ಕೆ ಎಸ್​ಐಆರ್​​ ಸ್ಥಾನಮಾನ ನೀಡಿದೆ.

50 ವರ್ಷದ ಇತಿಹಾಸ:

ಪೀಣ್ಯ ಕೈಗಾರಿಕೆ ಪ್ರದೇಶವು ಅರ್ಧ ಶತಮಾನದಿಂದ ಕೈಗಾರಿಕೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. 1969ರಲ್ಲಿ ಆಗಿನ ಸರ್ಕಾರ ಪೀಣ್ಯ ಕೈಗಾರಿಕೆ ಎಸ್ಟೇಟ್ ಸ್ಥಾಪಿಸಲು ಭೂಸ್ವಾಧೀನಕ್ಕೆ ಚಾಲನೆ ನೀಡಿತು. 1974ರಲ್ಲಿ ಕೈಗಾರಿಕೆ ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಯಿತು. 1998ರಲ್ಲಿ ಕೈಗಾರಿಕೆ ಬೆಳವಣಿಗೆಗೆ ‘ಪೀಣ್ಯ ಪ್ರಾಧಿಕಾರ’ ರಚಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಕಾರ್ಯ ವಿಳಂಬ ಆಗಿದ್ದರಿಂದ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದು ಪ್ರಾಧಿಕಾರ ರಚಿಸಲು ಆದೇಶಿಸಲಾಯಿತು. ಇದನ್ನಾಧರಿಸಿ 2002ರಲ್ಲಿ ಸರ್ಕಾರ ಸಂಪುಟ ನಿರ್ಧಾರ ಕೈಗೊಂಡಿತು. ಮತ್ತೆ ಪ್ರಾಧಿಕಾರದ ಮಾನ್ಯತೆ ನೀಡಿಕೆ ಹಿಂದೆ ಸರಿಯಿತು. 2021ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪೀಣ್ಯ ಕೈಗಾರಿಕೆ ಟೌನ್‌ಶಿಪ್ ಪ್ರಾಧಿಕಾರ ಘೋಷಿಸಲು ತೀರ್ಮಾನಿಸಲಾಯಿತು. 2022ರಲ್ಲಿ ಕೈಗಾರಿಕೆ ಇಲಾಖೆ, ನಗರಾಭಿವೃಧ್ಧಿ ಇಲಾಖೆ ಹಾಗೂ ಬಿಬಿಎಂಪಿ ಮುಖ್ಯಸ್ಥರ ಜಂಟಿ ಸಭೆಯಲ್ಲಿ ಟೌನ್‌ಶಿಪ್ ಘೋಷಣೆಗೆ ಮಾನ್ಯತೆ ಸಿಕ್ಕಿತು. ನಂತರದಲ್ಲಿ ಬಜೆಟ್‌ನಲ್ಲಿ ಕೆಲ ಅಂಶ ಸೇರಿಸಿದ ಬಳಿಕ ಈಗ ಅಧಿಕೃತವಾಗಿ ಎಸ್‌ಐಆರ್‌ಗೆ ಅಧಿಸೂಚನೆ ಹೊರಬಿದ್ದಿದೆ.

ಕೈಗಾರಿಕೋದ್ಯಮಿಗಳ ನಿರೀಕ್ಷೆ ಏನು?:

* ಕಾಲಮಿತಿಯೊಳಗೆ ಎಸ್‌ಐಆರ್‌ಗೆ ಸಕಲ ಮೂಲಸೌಕರ್ಯ ಕಲ್ಪಿಸಬೇಕು

* ಕೆಐಎಡಿಬಿ ನೇತೃತ್ವದಲ್ಲಿ ಹೊಸ ಮಂಡಳಿ ಬೇಗನೆ ಸ್ಥಾಪಿಸಬೇಕು

* ಕೈಗಾರಿಕೆ ಸ್ನೇಹಿ ವಾತಾವರಣ ಕಲ್ಪಿಸಲು ಸರ್ಕಾರ ಪ್ರಥಮ ಆದ್ಯತೆ ನೀಡಲಿ

* ಹೊಸ ಹೂಡಿಕೆದಾರರಿಗೆ ಅವಕಾಶ, ಹಾಲಿ ಘಟಕಗಳ ಮೇಲ್ದರ್ಜೆಗೆ ನೆರವು

ಎಸ್‌ಐಆರ್‌ನಿಂದಾಗುವ ಲಾಭ:

* ಉದ್ಯೋಗಾವಕಾಶ ಹೆಚ್ಚಳ, ಆದಾಯ ವೃದ್ಧಿಗೂ ದಾರಿ

* ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಲು ಅವಕಾಶ

* ರಾಜ್ಯ/ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ರೂಪದಲ್ಲಿ ಅಧಿಕ ತೆರಿಗೆ ಸಂಗ್ರಹ

* ದೇಶದ ಕೈಗಾರಿಕೆ ಹಬ್ ಆಗಿ ಗುರುತಿಸಿಕೊಳ್ಳಲು ಸಾಧ್ಯ.

ಪೀಣ್ಯ ಕೈಗಾರಿಕೆ ಪ್ರದೇಶಕ್ಕೆ ಎಸ್‌ಐಆರ್ ಸ್ಥಾನಮಾನ ನೀಡಿರುವುದು ಉದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆಯ ಶೇ.70 ಪಾಲು ಅಲ್ಲಿನ ಮೂಲಸೌಕರ್ಯಕ್ಕೆ ವಿನಿಯೋಗಿಸಬಹುದಾಗಿದೆ. ಇದನ್ನು ಕೆಐಎಡಿಬಿ ಮೂಲಕ ರಚನೆಯಾಗಲಿರುವ ಹೊಸ ಮಂಡಳಿಯಿಂದ ಕಾರ್ಯನಿರ್ವಹಣೆ ಆಗಲಿದೆ. ತಡವಾಗಿಯಾದರೂ ಎಸ್‌ಐಆರ್ ಮಾನ್ಯತೆ ನೀಡಿರುವ ಸರ್ಕಾರದ ನಡೆಗೆ ಅಭಿನಂದನೆ.

- ಎಂ.ಜಿ.ಬಾಲಕೃಷ್ಣ, ಎಫ್​​​ಕೆಸಿಸಿಐ ಅಧ್ಯಕ್ಷ

ದಶಕಗಳ ಬೇಡಿಕೆಯಾಗಿದ್ದ ಟೌನ್‌ಶಿಪ್ ಕನಸು ಈಗ ನನಸಾಗುತ್ತಿದೆ. ಪೀಣ್ಯ ಕೈಗಾರಿಕೆ ಪ್ರದೇಶವು ಎದುರಿಸುತ್ತಿರುವ ಮೂಲಸೌಕರ್ಯ ಕೊರತೆಯನ್ನು ಎಸ್‌ಐಆರ್ ನಿವಾರಿಸುವ ಭರವಸೆ ಇದೆ. ಈಗಿನಿಂದಲೇ ಸರ್ಕಾರ ಕೆಐಎಡಿಬಿ ಮೂಲಕ ಸೌಕರ್ಯ ಕಲ್ಪಿಸುವ ಕಾರ್ಯವನ್ನು ಆರಂಭಿಸಬೇಕು. ಇದರಿಂದ ಹೊಸ ಉದ್ಯೋಗಾವಕಾಶ ಸೃಷ್ಟಿ ಜತೆಗೆ ಸರ್ಕಾರಕ್ಕೆ ಜಿಎಸ್‌ಟಿ ರೂಪದಲ್ಲಿ ಆದಾಯ ವೃದ್ಧಿಯಾಗಲಿದೆ.

- ಆರ್.ಶಿವಕುಮಾರ್​, ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ