ಜಿಲ್ಲೆ

ಬಳಕೆ ಮಾಡದ ಮಳಿಗೆಗಳನ್ನು ವಾಪಸ್‌ ಪಡೆಯಿರಿ

Uttara Kannada - Subash Hegde

ಕಾರವಾರ: ಜಿಲ್ಲೆಯ ಕೈಗಾರಿಕಾ ವಸಾಹತುಗಳಲ್ಲಿ ಹಂಚಿಕೆ ಮಾಡಲಾದ ಮಳಿಗೆ, ನಿವೇಶನಗಳಲ್ಲಿ ಇದುವರೆಗೆ ಚಟುವಟಿಕೆಯನ್ನು ಆರಂಭಿಸದೇ ಇರುವ ಘಟಕಗಳ ಬಗ್ಗೆ ನಿಯಮಾನುಸಾರ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.

ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೈಗಾರಿಕಾ ಇಲಾಖೆಯ, ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆ ಮತ್ತು ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಳಕೆ ಮಾಡದ ಮಳಿಗೆಗಳನ್ನು ವಾಪಸ್ ಪಡೆದು,ಅಗತ್ಯವಿರುವವರಿಗೆ ಮರು ಹಂಚಿಕೆ ಮಾಡಿ ಎಂದು ಸೂಚಿಸಿದರು. ಹಂಚಿಕೆಯಾಗದೇ ಬಾಕಿ ಇರುವ ಮಳಿಗೆಗಳನ್ನು ಶೀಘ್ರದಲ್ಲಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದರು.

ದಾಂಡೇಲಿಯ ಕೈಗಾರಿಕಾ ವಸಾಹತಿನಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ನೋಂದಣಿ ಮಾಡಲು ಇರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಒಂದು ತಿಂಗಳ ಒಳಗೆ ಸಂಬಂಧಪಟ್ಟ ಕೈಗಾರಿಕೋದ್ಯಮಿಗಳಿಗೆ ನಿವೇಶನಗಳನ್ನು ನೋಂದಣಿ ಮಾಡಿ ಕೊಡುವಂತೆ ಸೂಚಿಸಿದರು. ಕುಮಟಾ ಕೈಗಾರಿಕಾ ವಸಾಹತಿನಲ್ಲಿ ಬೀದಿದೀಪಗಳ ಸಮಸ್ಯೆ ಬಗೆಹರಿಸಿ, ಪ್ರತ್ಯೇಕ ಫೀಡರ್ ಅಳವಡಿಸಲು ಕ್ರಮ ವಹಿಸಿ. ರಾಮನಗರ ಕೈಗಾರಿಕಾ ವಸಾಹತಿನಲ್ಲಿ ಘಟಕಗಳಿಗೆ ನೀರು ಪೂರೈಸುವ ಬಗ್ಗೆ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಲು ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಮುಡಗೇರಿಯಲ್ಲಿ ಹೊಸದಾಗಿ ಅಭಿವೃದ್ಧ್ದಿಪಡಿಸುತ್ತಿರುವ ಕೈಗಾರಿಕಾ ಪ್ರದೇಶಕ್ಕೆ ಸಂಬಂದಿಸಿದಂತೆ ಆದಷ್ಟು ಶೀಘ್ರದಲ್ಲಿ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚಿಸಿದರು.

ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಸಾಲದ ಅರ್ಜಿಗಳನ್ನು ಸಣ್ಣ ಪುಟ್ಟ ಕಾರಣಗಳಿಗೆ ತಿರಸ್ಕರಿಸಬೇಡಿ, ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಅರ್ಜಿ ಸಲ್ಲಿಸುವವರಿಗೆ ತಾವು ಕೈಗೊಳ್ಳುವ ಉದ್ದೇಶಿತ ಯೋಜನೆಯ ಬಗ್ಗೆ ಪ್ರಾಸ್ತಾವಿಕ ಯೋಜನಾ ವರದಿ ಸಲ್ಲಿಸುವ ಕುರಿತಂತೆ ಸೂಕ್ತ ಮಾಹಿತಿ ನೀಡುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ನಾಯ್ಕ ಉಪಸ್ಥಿತರಿದ್ದರು.