ಬೇಲೂರು: ತಾಲೂಕಿನ ಬಿಕ್ಕೋಡು ಗ್ರಾಮದಿಂದ ಸೋಮನಹಳ್ಳಿ ಹಾಗೂ ಇಂಟಿತೊಳಲು ಮೂಲಕ ಹತ್ತಾರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು ದುರಸ್ತಿಗೆ ಆಗ್ರಹಿಸಿ ತೀರ್ಥಪ್ಪ ಅವರು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಮಂಗಳವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಏಕಾಂಗಿ ಹೋರಾಟಗಾರ ತೀರ್ಥಪ್ಪ ಮಾತನಾಡಿ, ತಾಲೂಕಿನ ಬಿಕ್ಕೋಡು ವೃತ್ತದಿಂದ ಸೋಮನಹಳ್ಳಿ,ಇಂಟಿ ತೊಳಲು ಸೇರಿದಂತೆ ಸಂಪರ್ಕ ಕಲ್ಪಿಸುವ ಹತ್ತಾರು ಹಳ್ಳಿಗಳಲ್ಲಿ ವಾಹನಗಳು ಸಂಚರಿಸಲು ಹರಸಾಹಸಪಡಬೇಕಾಗಿದೆ. ರಸ್ತೆಯುದ್ದಕ್ಕೂ ಗುಂಡಿಗಳೇ ತುಂಬಿದ್ದು ಹಲವಾರು ಬಾರಿ ಅಪಘಾತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಹಿಂದೆ ಇದೇ ರಸ್ತೆಯಲ್ಲಿ ಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದೆವು. ಜತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚಾಗಿ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ. ರಾಜಕಾರಣಿಗಳು ಇಲ್ಲಿಯ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಆದಷ್ಟು ಬೇಗ ಈ ರಸ್ತೆಗಳ ಗುಂಡಿ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಸಿ ಕೊಡಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರೊಂದಿಗೆ ರಸ್ತೆ ಸಂಚಾರ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.