ಮೈಸೂರು: ಸ್ವರಧಾರ ಕಲಾ ಸಂಗಮ ವತಿಯಿಂದ ಅ.15 ರಂದು ಸಂಜೆ 5ಕ್ಕೆ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಕವಿತಾ ಕಾಮತ್ ಹೇಳಿದರು.
ಕಾರ್ಯಕ್ರಮದಲ್ಲಿ ಒಟ್ಟು 30 ಹಿಂದಿ ಹಾಗೂ ಕನ್ನಡ ಚಿತ್ರಗೀತೆಗಳನ್ನು ಗಾಯಕರಾದ ಕವಿತಾ ಕಾಮತ್, ನಿತ್ಯಾನಂದ ಕಾಮತ್, ಸದಾಶಿವ ಶೆಣೈ, ಬಿ. ಶ್ರೀಕಂಠರಾವ್, ನಾರಾಯಣ್, ಎ.ಸಿ. ರವಿ, ಜಗದೀಶ್ ಬಾಬು, ಎಚ್.ವಿ. ನಾಗೇಂದ್ರ, ಜಯಲಕ್ಷ್ಮಿ ನಾಯ್ಡು, ಲಕ್ಷ್ಮಿ ಹಾಗೂ ಪ್ರೇಮ ಕುಮಾರಿ ಹಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮ ನಡೆಸದೆ ನೇರವಾಗಿ ಗಾಯನ ಪ್ರಾರಂಭಿಸಲಾಗುವುದು. ಯುವ ತಲೆಮಾರಿನವರಿಗೆ ಹಳೆಯ ಚಿತ್ರಗೀತೆಗಳ ಮಾಧುರ್ಯವನ್ನು ತಿಳಿಸಿಕೊಡುವ ಪ್ರಯತ್ನವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಗಾಯಕರಿಗೆ ಸಾಕಷ್ಟು ಕಡೆಗಳಲ್ಲಿ ವೇದಿಕೆ ದೊರೆಯುತ್ತಿದೆ. ಆದರೆ, ಹಳೆಯ ಚಿತ್ರಗೀತೆಗಳನ್ನು ಹಾಡುವ ಗಾಯಕರಿಗೆ ವೇದಿಕೆಯ ಕೊರತೆ ಇದೆ. ಹೀಗಾಗಿ ಅಂತಹ ಗಾಯಕರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜಕರಾದ ನಿತ್ಯಾನಂದ ಕಾಮತ್, ಬಿ. ಶ್ರೀಕಂಠರಾವ್, ಸದಾಶಿವ ಶೆಣೈ ಇದ್ದರು.