ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಂತಾಪ ಸೂಚಿಸಲಾಯಿತು. ಸಿ.ಎಸ್.ಪುಟ್ಟೇಗೌಡ, ಸಿ.ಎಸ್.ಯುವರಾಜ್, ಎಲ್.ಪಿ.ಪ್ರಕಾಶ್‌ಗೌಡ, ದೊಡ್ಡೇರಿ ಶ್ರೀಕಂಠ ಇತರರು ಇದ್ದರು. 
ಜಿಲ್ಲೆ

ಯುವ ಜನರಿಗೆ ಸಿಂಗ್ ಬದುಕು ದಾರಿದೀಪ

ಲೋಕೇಶ್ ಮನು. ಡಿ

 ಚನ್ನರಾಯಪಟ್ಟಣ: ಪ್ರಧಾನಿಯಾಗಿ ದೇಶವನ್ನು ಆರ್ಥಿಕವಾಗಿ ಬಲಾಢ್ಯಗೊಳಿಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ತಾಲೂಕು ಕಾಂಗ್ರೆಸ್ ವತಿಯಿಂದ ಪಟ್ಟಣದ ಕೆ.ಆರ್.ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಮನಮೋಹನ್ ಸಿಂಗ್ ದೇಶದ ಅರ್ಥ ವ್ಯವಸ್ಥೆಯನ್ನು ನಿಭಾಯಿಸಿದ ರೀತಿ ನೋಡಿ ಪಾಶ್ಚಿಮಾತ್ಯ ದೇಶಗಳೇ ಬೆರಗಾಗಿದ್ದವು. ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಮಾ ತಮ್ಮ ದೇಶದ ಅರ್ಥಿಕ ವ್ಯವಸ್ಥೆ ಸದೃಢಗೊಳಿಸಲು ಸಿಂಗ್ ಅವರ ಸಲಹೆ ಕೇಳಿದ್ದರು. ಅವರ ಆದರ್ಶ ಬದುಕು ಮುಂದಿನ ಜನರಿಗೆ ದಾರಿದೀಪವಾಗಲಿದೆ ಎಂದರು.

ಯುವ ಮುಖಂಡ ಸಿ.ಎಸ್.ಯುವರಾಜ್ ಮಾತನಾಡಿ, ದೇಶವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವ ಮೂಲಕ ಸುಭದ್ರಗೊಳಿಸಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲಲಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ ವೇಳೆ ದೇಶದ ಚುಕ್ಕಾಣಿ ಹಿಡಿದು ಅರ್ಥ ವ್ಯವಸ್ಥೆಯನ್ನೆ ಗಟ್ಟಿಗೊಳಿಸಿದ್ದರು. ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿಗಳು ನಿರ್ಮಾಣವಾಗಲು ಮನಮೋಹನ್ ಸಿಂಗ್ ಕಾರಣರು. ನರೇಗಾ ಮೂಲಕ ಹಳ್ಳಿಯ ಜನರಿಗೆ ನೆರವಾದರು. ಆಹಾರ ಭದ್ರತೆ ಕಾಯ್ದೆ ಜಾರಿ ಮೂಲಕ ದೇಶದ ಜನರಿಗೆ ಆಹಾರ ನೀಡಿದವರು. ಇವರ ಆದರ್ಶ ಗುಣಗಳು ರಾಜಕೀಯದ ಕನಸು ಕಾಣುವ ಯುವಕರಿಗೆ ದಾರಿದೀಪವಾಗಿದೆ ಎಂದರು.

ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ, ಮುಖಂಡರಾದ ದೊಡ್ಡೇರಿ ಶ್ರೀಕಂಠ, ಎಂ.ಕೆ.ಮಂಜೇಗೌಡ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎನ್.ಡಿ.ಕಿಶೋರ್, ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್, ನುಗ್ಗೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕಿರಣ್, ಪುರಸಭಾ ಸದಸ್ಯರಾದ ಆದರ್ಶ, ಇಲಿಯಾಸ್ ಉಮಾಶಂಕರ್, ರವಿ, ಮುಖಂಡರಾದ ಅಶೋಕ್, ಕಬ್ಬಾಳು ಸುರೇಶ್, ಜಗದೀಶ್ ಇದ್ದರು.