ಜಿಲ್ಲೆ

ಭಕ್ತಿಗೀತೆಗಳಿಂದ ಮನಸ್ಸಿಗೆ ನೆಮ್ಮದಿ, ಆಹ್ಲಾದತೆ

ಇಂದ್ರಾಳಿ ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅನಿಸಿಕೆ

ನವರಾತ್ರಿ ನಿಮಿತ್ತ ಸಂಗೀತ ಸುಧಾ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಇತ್ತೀಚೆಗೆ ಯುವ ಪ್ರತಿಭೆ ಸಾಧ್ವಿನಿ ಕೊಪ್ಪ ಅವರ ವಿವಿಧ ಭಕ್ತಿಗೀತೆಗಳು ನನ್ನನ್ನೂ ಸೇರಿದಂತೆ ನಾಡಿನ ಅನೇಕರ ಮನ ಸೆಳೆದಿದೆ. ಅವರನ್ನು ಕಂಡಾಗ ದೇವತೆಯೆಂಬ ಭಾವನೆ ಮೂಡುವುದಲ್ಲದೆ, ಅವರ ಕಂಠದಿಂದ ಹೊರಹೊಮ್ಮುವ ಭಕ್ತೀಗಿತೆಗಳು ಮನಸ್ಸಿಗೆ ನೆಮ್ಮದಿ, ಆಹ್ಲಾದತೆ ನೀಡುತ್ತವೆ ಎಂದು ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಶರನ್ನವರಾತ್ರಿ ನಿಮಿತ್ತ ಶನಿವಾರ (ಸೆ.27) ಸಂಜೆ ಆಯೋಜಿಸಿದ್ದ ಗಾನ ಕೋಗಿಲೆ ಖ್ಯಾತಿಯ ಗಾಯಕಿ ವಿದುಷಿ ಸಾಧ್ವಿನಿ ಕೊಪ್ಪ ಅವರ ಸಂಗೀತ ಸುಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೀತವು ದೈವಿಕ ಕಲೆ

ಗಾಯಕಿ ಸಾಧ್ವಿನಿ ಕೊಪ್ಪ ಮಾತನಾಡಿ, ಪಂ.ಭೀಮಸೇನ್​ ಜೋಶಿ, ಕಿಶೋರ್​ಕುಮಾರ್​ ಅವರಂತಹ ದಿಗ್ಗಜ ಕಲಾವಿದರನ್ನು ಪ್ರಥಮ ಬಾರಿಗೆ ಉಡುಪಿಗೆ ಕರೆಯಿಸಿ ಸಂಗೀತ ಕಾರ್ಯಕ್ರಮ ಕೊಡಿಸಿದ ಕೀರ್ತಿ ಕೆ.ಅಣ್ಣಪ್ಪ ಶೆಣೈ ಅವರದ್ದು. ಅಂತಹ ಹಿರಿಯರು ನನಗೆ ಉಡುಪಿಯಲ್ಲಿ ಅದರಲ್ಲೂ ಕೃಷ್ಣನ ಊರಿನಲ್ಲಿ ಹಾಡಲು ಅವಕಾಶ ಮಾಡಿಕೊಟ್ಟಿದ್ದು ನನ್ನ ಪುಣ್ಯ. ಸಂಗೀತ ಎನ್ನುವುದು ದೈವಿಕ ಕಲೆ. ತ್ಯಾಗರಾಜರು, ಪುರಂದರ-ಕನಕದಾಸರು ಭಕ್ತೀಗಿತೆಯಿಂದಲೇ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡವರು. ಮನೆಯಲ್ಲಿ ಭಾರತೀಯ ಸಂಗೀತ ಕೇಳೋಣ, ಬೆಳೆಸೋಣ ಎಂದರು.

ಕಾರ್ಯಕ್ರಮದಲ್ಲಿ ಸುಧಾ ಅಣ್ಣಪ್ಪ ಶೆಣೈ, ಅಕಾಡೆಮಿಕ್​ ಕಾರ್ಯದರ್ಶಿ ಪ್ರೊ. ಶ್ರೀಧರ ಪೈ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯಕ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಆತ್ರಾಡಿ ದಿನೇಶ ಹೆಗ್ಡೆ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಟರಾಜ ಪ್ರಭು ಉಪಸ್ಥಿತರಿದ್ದರು.

ಇಂದ್ರಾಳಿ ಪ್ರೌಢಶಾಲೆಯ ಮುಖ್ಯೋಧ್ಯಾಪಕ ಕೆ. ವಿನಾಯಕ ಕಿಣಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕಿ ರೇಷ್ಮಾ ಪ್ರಭು ವಂದಿಸಿದರು. ಶಿಕ್ಷಕಿ ಸಾಧನಾ ಶ್ರೀಶಾಂತ ಕಾರ್ಯಕ್ರಮ ನಿರೂಪಿಸಿದರು.

ಮನ ಸೆಳೆದ ನವರಾತ್ರಿ ಕಛೇರಿ

ನವರಾತ್ರಿಯ ಈ ಕಾರ್ಯಕ್ರಮದಲ್ಲಿ ಸಾಧ್ವಿನಿ ಕೊಪ್ಪ ಅವರು ನಿರಂತರ ಎರಡು ಗಂಟೆಗಳ ಕಾಲ ಸಂಗೀತ ಕಛೇರಿ ನಡೆಸಿಕೊಟ್ಟರು. ಮಹಾಗಣಪತಿಂ ಮನಸಾ ಸ್ಮರಾಮಿ ಎಂಬ ಗಣಪತಿ ಸ್ತುತಿಯೊಂದಿಗೆ ಆರಂಭಿಸಿ ವಿವಿಧ ಭಕ್ತೀಗಿತೆ, ದೇವರ ನಾಮ, ಭಜನೆ, ದಾಸರ ಪದಗಳ ಮೂಲಕ ಪ್ರೇಕ್ಷಕರನ್ನು ಭಕ್ಕತಿ ಲೋಕಕ್ಕೆ ಕೊಡೊಯ್ದರು. ಕೀಬೋರ್ಡ್​ನಲ್ಲಿ ಎಂ.ಕೆ. ಶ್ರೀನಿಧಿ, ಮೃದಂಗ- ಪ್ರಣವ್​ ಸುಬ್ರಹ್ಮಣ್ಯ, ವಯೋಲಿನ್​- ಗೌತಮ ಭಟ್​, ಕೊಳಲು- ಲೋಕೇಶ ಸಂಪಿಗೆ, ರಿದಂ ಪ್ಯಾಡ್​- ಸುಭಾಸ ಹೆಬ್ಬಾರ್​ ಸಾಥ್​ ನೀಡಿದರು. ಪ್ರೇಕ್ಷಕರೂ ಸಹ ಹಾಡುಗಳಿಗೆ ಸ್ವರ ಸೇರಿಸಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಿದರು.