ಜಿಲ್ಲೆ

ಮೈಸೂರು ದಸರಾ : ಸಂಗೀತದ ಹೊನಲು ಹರಿಸಿದ ಹರಿಹರನ್

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಸಂಭ್ರಮದ ಚಾಲನೆ ದೊರೆಯಿತು. ಮೊದಲ ದಿನ ಖ್ಯಾತ ಗಾಯಕ ಹರಿಹರನ್ ಸಂಗೀತದ ಮಾಧುರ್ಯವನ್ನು ಸಾಂಸ್ಕೃತಿಕ ಜನರಿಗೆ ಉಣಬಡಿಸಿದರು.

ಹಿಂದಿ, ಕನ್ನಡ, ತಮಿಳು ಭಾಷೆಯ ಹಾಡಗಳನ್ನು ಹಾಡುವ ಮೂಲಕ ಅವರು ರಂಜಿಸಿದರು. ಗಜಲ್, ಸಿನಿಮಾ ಹಾಡುಗಳು ಹಾಗೂ ಶಾಸ್ತ್ರೀಯ ಗಾಯನದ ಮೂಲಕ ಮೋಡಿ ಮಾಡಿದರು. ಹರಿಹರನ್ ಅವರ ಪ್ರತಿಯೊಂದು ಹಾಡುಗಳಿಗೆ ಜನರು ತಲೆದೂಗಿದ್ದು ಮಾತ್ರವಲ್ಲದೆ ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಜಗ ಜನನಿ ಜಯ ದುರ್ಗೆ.., ಜಗತ್ ಜನನಿ ಭಗವತಿ.., ಶ್ರೀ ರಾಧೆ ಗೋವಿಂದ ಗೋಪಾಲ ಮೇರ ಪ್ಯಾರ ನಾಮ್ ಹೇ.., ಕೃಷ್ಣ ನೀ ಬೇಗನೆ ಬಾರೋ..., ಎನ್ನೈ ತಾಲಾಟ್ ವರುವಾಳೋ... ಮುಂತಾದ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.

ವೈವಿಧ್ಯಯ ಕಾರ್ಯಕ್ರಮ: ಹರಿಹರನ್ ಅವರ ಕಾರ್ಯಕ್ರಮಕ್ಕೂ ಮುನ್ನ ಅರಮನೆ ವೇದಿಕೆಯಲ್ಲಿ ನಡೆದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ರಂಜಿಸಿದವು. ಶ್ರೀ ಮಲೆಮಹದೇಶ್ವರ ಬೀಸು ಕಂಸಾಳೆ ಜಾನಪದ ಸಂಘ ಹಾಗೂ ನೆರಳು ತಂಡದಿಂದ ಆಕರ್ಷಕ ಕಂಸಾಳೆ ನೃತ್ಯ ಪ್ರದರ್ಶಿಸಿದರು. ಗೋಪಿ ತಂಡದವರು ಮಂಗಳವಾದ್ಯ ನುಡಿಸುವ ಮೂಲಕ ಮಂಗಳಕರ ವಾತಾವರಣ ನಿರ್ಮಾಣ ಮಾಡಿದರು. ಉಡಿಗಾಲ ಮಹದೇವಪ್ಪ ಮತ್ತು ಶ್ರೀ ಮಲ್ಲೇಶಯ್ಯ ತಂಡದಿಂದ ನಂದಿಧ್ವಜ ಕುಣಿತ, ಶ್ರೀ ನೀಲಕಂಠ ತಂಡದವರು ವೀರಭದ್ರ ಕುಣಿತದ ಮೂಲಕ ಗಮನ ಸೆಳೆದರು.

ಸುಮಂತ್ ವಸಿಷ್ಠ ತಂಡದವರು ನಡೆಸಿಕೊಟ್ಟ ಭಾವಗೀತೆಗಳ ಗಾಯನ ಹಾಗೂ ಕನ್ನಡ ನಾಡುನುಡಿಯ ಕುರಿತು ಅಭಿಮಾನ ಮೂಡಿಸುವಂತಹ ಕನ್ನಡದ ಚಿತ್ರಗೀತೆಗಳ ಗಾಯನ ಮನಸೂರೆಗೊಂಡಿತು. ಇಳಿದು ಬಾ ತಾಯೆ ಇಳಿದು ಬಾ.., ಕಾಣದ ಕಡಲಿಗೆ ಹಂಬಲಿಸಿದೆ ಮನ.., ತಿಂಗಳು ಮುಳುಗಿದವೋ ರಂಗೋಲಿ ಬೆಳಗಿದವೋ.., ಇದೇ ತಂಡದವರು ಮೈಸೂರು ಸಂಸ್ಥಾನದ ಆಸ್ಥಾನ ಗೀತೆ ‘ಕಾಯೋ ಶ್ರೀ ಗೌರಿ ಕರುಣಾ ಲಹರಿ..’ ಹಾಗೂ ನಾಡಗೀತೆ ‘ಜಯ ಭಾರತ ಜನನಿನ ತನುಜಾತೆ’.., ಕನ್ನಡ ನಾಡಿನ ಜೀವನದಿ ಕಾವೇರಿ.., ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ.., ಸೋಜುಗಾದ ಸೂಜುಮಲ್ಲಿಗೆ.., ತರವಲ್ಲ ತಗಿ ನಿನ್ನ ತಂಬೂರಿ.., ಕರ್ನಾಟಕದ ಇತಿಹಾಸದಲ್ಲಿ ಬಂಗಾರದ ಯುಗದ ಕತೆಯನ್ನು... ಸೇರಿದಂತೆ ವಿವಿಧ ಹಾಡುಗಳನ್ನು ರಂಜಿಸಿದರು.

ಹರಿದು ಬಂದ ಜನಸ್ತೋಮ

ದಸರಾ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಅರಮನೆ ಆವರಣಕ್ಕೆ ಸೋಮವಾರ ಜನಸಾಗರವೇ ಹರಿದು ಬಂತು. ಕಾರ್ಯಕ್ರಮ ವೀಕ್ಷಿಸಲು ಅಳವಡಿಸಿದ್ದ ಕುರ್ಚಿಗಳು ಸಂಪೂರ್ಣ ಭರ್ತಿಯಾಗಿ ಸಾಕಷ್ಟು ಜನರು ನಿಂತುಕೊಂಡು ಕಾರ್ಯಕ್ರಮ ವೀಕ್ಷಿಸಿದರು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಆಸನಗಳ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಲ್ಪಿಸಲಾಗಿದೆ.

ಮುಖ್ಯಮಂತ್ರಿ ಚಾಲನೆ

ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಟಿ.ಎಸ್. ಶ್ರೀವತ್ಸ, ಸಿ.ಅನಿಲ್ ಕುಮಾರ್, ಎ.ಆರ್. ಕೃಷ್ಣಮೂರ್ತಿ, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಡಿ.ತಿಮ್ಮಯ್ಯ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ಎಂ. ವೆಂಕಟೇಶ್ ಕುಮಾರ್, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ ಮಾನಸ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್, ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯೂಕೇಶ್ ಕುಮಾರ್ ಹಾಗೂ ಇತರರು ಇದ್ದರು.