ಜಿಲ್ಲೆ

ಮಾರ್ಚ್, ಏಪ್ರಿಲ್‌ನಲ್ಲಿ ಸಿಂಗಳೀಕ ಸಮೀಕ್ಷೆ

Udupi

ಉಡುಪಿ: ಮಂಗಗಳ ಜಾತಿಯಲ್ಲೇ ಅತ್ಯಂತ ಶಿಸ್ತುಬದ್ಧ ಜೀವನ ಕ್ರಮವಿರುವ ಸಿಂಗಳೀಕ (ಲಯನ್ ಟೇಲ್ಡ್ ಮಕಾಕ) ಅಳಿವಿನಂಚಿನಲ್ಲಿರುವ ಅಪೂರ್ವ ವನ್ಯಜೀವಿ. ಕುದುರೆಮುಖ ವನ್ಯಜೀವಿ ವಿಭಾಗ ವತಿಯಿಂದ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಯುವ ಸಮೀಕ್ಷೆ ಈ ವರ್ಷ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2012ರಲ್ಲಿ ಯುನೆಸ್ಕೊ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ 25 ಪ್ರಾಣಿ ಸಂಕುಲಗಳ ಪಟ್ಟಿಯಲ್ಲಿ ಈ ಸಿಂಗಳೀಕ ಸಹ ಒಂದು. ಪ್ರಸ್ತುತ ಇಡೀ ಜಗತ್ತಿನಲ್ಲಿ ಎಲ್ಲಿಯೂ ಇರದ, ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುವ ಸಿಂಗಳೀಕಗಳ ಸಂಖ್ಯೆ ಪ್ರಸ್ತುತ 3000-3500 ಮಾತ್ರ. 39 ಗುಂಪುಗಳಲ್ಲಿ 587 ಸಿಂಗಳೀಕ: ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಒಳಗೊಂಡ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ 2015ರಲ್ಲಿ ಸಿಂಗಳೀಕ ಸಮೀಕ್ಷೆ ನಡೆದಿದ್ದು, ಅರಣ್ಯಾಧಿಕಾರಿಗಳು, ಪರಿಸರ, ವನ್ಯಜೀವಿ ತಜ್ಞರು ಭಾಗವಹಿಸಿದ್ದರು. 39 ಗುಂಪುಗಳಲ್ಲಿ 587 ಸಿಂಗಳೀಕಗಳು ಇರುವುದನ್ನು ದಾಖಲಿಸಲಾಗಿತ್ತು. ಇದರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ 21 ಗುಂಪಿನಲ್ಲಿ 392, ಸೋಮೇಶ್ವರ ವನ್ಯಜೀವಿಧಾಮದಲ್ಲಿ 8 ಗುಂಪುಗಳಲ್ಲಿ 87, ಮೂಕಾಂಬಿಕಾ ವನ್ಯಜೀವಿಧಾಮದಲ್ಲಿ 108 ಸಿಂಗಳೀಕಗಳು 10 ಗುಂಪುಗಳಲ್ಲಿ ಇರುವುದನ್ನು ಗುರುತಿಸಲಾಗಿತ್ತು. ಪಶ್ಚಿಮಘಟ್ಟ ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ 30 ವರ್ಷಗಳಲ್ಲಿ ಶೇ.34.77ರಷ್ಟು ಸಿಂಗಳೀಕ ಸಂತತಿ ನಾಶವಾಗಿರುವುದು ಆಘಾತಕಾರಿ ಸಂಗತಿಯಾಗಿದೆ.

ಸಿಂಗಳೀಕ ಜೀವನಕ್ರಮ ಬದಲಾವಣೆ ಆತಂಕಕಾರಿ. ಇಡೀ ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದ ಈ ಜೀವಿ ಕರ್ನಾಟಕ, ಕೇರಳ, ತಮಿಳುನಾಡಿನ ಕೆಲವು ಭಾಗದಲ್ಲಿ ಮಾತ್ರ ಕಾಣಸಿಗುತ್ತದೆ. ಸಿಂಗಳೀಕಗಳ ಪ್ರಸ್ತುತ ಜೀವನಕ್ರಮ, ಸಂರಕ್ಷಣೆಗಾಗಿ ಮಾರ್ಚ್, ಏಪ್ರಿಲ್‌ನಲ್ಲಿ ಸಮೀಕ್ಷೆ ನಡೆಸಲಾಗುವುದು. | ರುದ್ರನ್, ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ