ಜಿಲ್ಲೆ

ಸೈನಿಕರಿಗೆ ಗೌರವ ನೀಡುವ ಪ್ರಯತ್ನ : ಶಾಸಕ ಡಾ.ಭರತ್ ಶೆಟ್ಟಿ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಗುರುಪುರ

ಮಂಗಳೂರು ಉತ್ತರ ಕ್ಷೇತ್ರದಲ್ಲಿ ತನ್ನ ಮೊದಲ ಅವಧಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೆವು. ಸ್ಥಳೀಯ ಕಾರ್ಪೊರೇಟರ್ ಮತ್ತು ಸಾರ್ವಜನಿಕರು ಕೊಟ್ಟಾರ ಜಂಕ್ಷನ್‌ನಲ್ಲಿ ಸೈನಿಕರ ಸ್ಮರಿಸುವ ಪಾರ್ಕ್ ನಿರ್ಮಿಸಲು ಬೇಡಿಕೆ ಇಟ್ಟಿದ್ದರು. ದೇಶದ ಸೈನಿಕರಿಗೆ ಗೌರವ ನೀಡುವ ಪ್ರಯತ್ನವೊಂದು ನಡೆದಿದೆ. ಕುಟುಂಬ ತೊರೆದು ದೇಶದ ಗಡಿ ಪ್ರದೇಶದಲ್ಲಿ ಸೇವಾನಿರತ ಸೈನಿಕರ ತ್ಯಾಗ ಪ್ರತಿಯೊಬ್ಬರಲ್ಲೂ ಸದಾ ಜಾಗೃತವಾಗಿರಬೇಕು. ಉದ್ಯಾನ ಯೋಜನೆ ಸಾಕಾರಗೊಂಡಿರುವುದರಿಂದ ತನಗೆ ಸಂತೋಷವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿ 66ರ ಬಳಿ, ಮನಪಾ 16ನೇ ಬಂಗ್ರಕೂಳೂರು ವಾರ್ಡ್‌ನ ಕೊಟ್ಟಾರ ಚೌಕಿಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 42.35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಿಂಧೂರ ವಿಜಯ ಪಾರ್ಕ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.

ಭಾರತ ಇತ್ತೀಚೆಗೆ ಪಾಕಿಸ್ತಾನದ ಉಗ್ರರ ವಿರುದ್ಧ ನಡೆಸಿದ ಯುದ್ಧ ಹಾಗೂ ಜಯದ ಸಂಕೇತವಾಗಿ ಸಿಂಧೂರ ವಿಜಯ ಹೆಸರು ನಾಮಕರಣ ಮಾಡಲಾಗಿದೆ. ಈ ಮೂಲಕ ಸೈನಿಕರ ಕಾರ್ಯಾಚರಣೆ ಸದಾ ನೆನಪಿನಲ್ಲಿ ಉಳಿಯಲಿದೆ ಎಂದರು.

ಮುಡಾದ ಅಧ್ಯಕ್ಷ ಸದಾಶಿವ ಉಳ್ಳಾಲ್ ಸಿಂಧೂರ ಪಾರ್ಕನ್ನು ಉದ್ಘಾಟಿಸಿದರು. ಪ್ರಾಧಿಕಾರದ ಸದಸ್ಯರಾದ ನೀರಜ್‌ಚಂದ್ರ ಪಾಲ್, ಅಬ್ದುಲ್ ಜಲೀಲ್, ಸುಮನ್ ದಾಸ್, ಸಬಿತಾ ಮಿಸ್ಕಿತ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಮುಹಮ್ಮದ್ ನಝೀರ್, ಸಹಾಯಕ ಕಾರ್ಯಪಾಲ ಇಂಜಿನಿಯರ್ ಅಶ್ವಿನಿ, ಸಹಾಯಕ ಇಂಜಿನಿಯರ್ ಅಕ್ಬರ್ ಬಾಷಾ, ಮನಪಾ ನಿಕಟಪೂರ್ವ ಕಾರ್ಪೊರೇಟರ್‌ಗಳಾದ ಮನೋಜ್ ಕುಮಾರ್, ಕಿರಣ್ ಕುಮಾರ್ ಕೋಡಿಕಲ್, ರಂಜಿನಿ ಕೋಟ್ಯಾನ್, ಬಿಜೆಪಿ ಮುಖಂಡರಾದ ಸಿತೇಶ್ ಕೊಂಡೆ, ಆಶಿತ್ ನೋಂಡ, ಹರಿಪ್ರಸಾದ್ ಶೆಟ್ಟಿ, ಉಮೇಶ್ ಮಲರಾಯಸಾನ, ಸಂಜಿತ್ ಶೆಟ್ಟಿ, ರಮೇಶ್ ಮತ್ತಿತರರು ಇದ್ದರು.

ಇದು 42.35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸೈನಿಕರ ಸ್ಮರಿಸುವ ಪಾರ್ಕ್. ಶಾಸಕ ಡಾ.ಭರತ್ ಶೆಟ್ಟಿ ತಮ್ಮ ಕ್ಷೇತ್ರಾದ್ಯಂತ ಅತ್ಯುತ್ತಮ ಅಭಿವೃದ್ಧಿ ಕಾರ್ಯ ನಡೆಸುತ್ತ ಬಂದಿದ್ದು, ಈ ಯೋಜನೆ ಕಾರ್ಯಗತಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಮುಡಾದ ಸದಸ್ಯರು, ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು, ಅಧಿಕಾರಿಗಳ ಉತ್ತಮ ಸಮನ್ವಯದಿಂದ ಈ ಕಾರ್ಯ ಸುಲಭ ಸಾಧ್ಯವಾಗಿದೆ. ಸದಾಶಿವ ಉಳ್ಳಾಲ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ https://www.vijayavani.net/illegal-sale-of-alcohol-in-the-shop https://www.vijayavani.net/wild-buffalo-movement-in-poovadka