ಜಿಲ್ಲೆ

ಶಾಲೆಗಳಲ್ಲಿ ಕಡಿಮೆಯಾಗಲಿದೆ ದಾಖಲಾತಿ

ಸಿಂಧನೂರು: ಆರ್‌ಟಿಇ ಕಾಯ್ದೆಯಡಿ ಉಚಿತ ಶಿಕ್ಷಣ ಪಡೆಯುತ್ತಿರುವವರಿಗೆ ವಿದ್ಯಾರ್ಥಿ ವೇತನ ನೀಡುವುದಿಲ್ಲ ಎಂಬ ಸರ್ಕಾರದ ನಿರ್ಧಾರ ವಿರೋಧಿಸಿ ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ತಹಸಿಲ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆ ಅನುಸಾರ ಮೆಟ್ರಿಕ್‌ಪೂರ್ವ ಶಿಷ್ಯ ವೇತನವನ್ನು ಕೇವಲ 9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಕೊಡಬೇಕು. 1ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಆರ್‌ಟಿಇ ಕಾಯ್ದೆ ಅಡಿ ಉಚಿತ ಶಿಕ್ಷಣ ಪಡೆಯುವುದರಿಂದ ಅವರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕೊಡುವಂತಿಲ್ಲ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದು ನೇರವಾಗಿ 6ರಿಂದ 14 ನೇ ವಯಸ್ಸಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕೆನ್ನುವ ಮೂಲಭೂತ ಹಕ್ಕಿ ಉಲ್ಲಂಘನೆಯಾಗಿದೆ. ಏಕಾಏಕಿ ವಿದ್ಯಾರ್ಥಿ ವೇತನ ನಿಲ್ಲಿಸಿರುವುದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗಲಿದೆ. ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಈ ನಿರ್ಧಾರ ಕೈಬಿಡಬೇಕೆಂದು ಒತ್ತಾಯಿಸಿದರು.