ಸಿಂಧನೂರು: ನಗರಕ್ಕೆ ಜೂನ್ ಅಂತ್ಯದವರೆಗೆ ಪೂರೈಕೆ ಮಾಡುವಷ್ಟು ನೀರು ಲಭ್ಯವಿದೆ. ಕೆರೆಗಳು ಖಾಲಿಯಾಗಿವೆಂದು ಸುಳ್ಳು ಹೇಳುತ್ತಿದ್ದಾರೆ. ಆತಂಕಪಡುವ ಅಗತ್ಯವಿಲ್ಲ. ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮನವಿ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿ, ಸಿಂಧನೂರು ನಗರಸಭೆಯ ವಿವಿಧ ಕೆರೆಗಳಲ್ಲಿ ಒಟ್ಟು 1000 ಎಂಎಲ್‌ಡಿ ನೀರು ಸಂಗ್ರಹವಿದೆ. ಜೂನ್ ತಿಂಗಳವರೆಗೆ ನೀರು ಸರಬರಾಜನ್ನು ನಗರಸಭೆಯು ಅತ್ಯಂತ ಸುಸಜ್ಜಿತವಾಗಿ ಸರಬರಾಜು ಮಾಡುತ್ತಿದೆ. ದಯವಿಟ್ಟು ಸಾರ್ವಜನಿಕರು ಯಾವುದೇ ಕಾರಣಕ್ಕೂ ಗಾಳಿ ಸುದ್ದಿಗೆ ಕಿವಿಗೊಡಬಾರದು. ಪ್ರಸ್ತುತ ವಾರಕ್ಕೊಮ್ಮೆ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಲಭ್ಯತೆಯ ಆಧಾರದಮೇಲೆ ನೀರು ಸರಬರಾಜು ವಿತರಣಾ ಅವಧಿಯನ್ನು ವಿಸ್ತರಿಸಲಾಗುವುದು. ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಬೇಕು. ಕಡ್ಡಾಯವಾಗಿ ನಲ್ಲಿಗಳಿಗೆ ಕಂಟ್ರೊಲರ್ ಗಳನ್ನು ಹಾಕಬೇಕು. ಒಂದು ವೇಳೆ ನೀರನ್ನು ಅನಾವಶ್ಯಕವಾಗಿ ವ್ಯಯಿಸಿದರೆ ಅವರಿಗೆ ನಿಯಮಾನುಸಾರ ದಂಡ ವಿಧಿಸುವುದಲ್ಲದೇ, ಅವರ ನಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಚ್ಚರಿಸಿದರು.