ಜಿಲ್ಲೆ

ಸಿಂಧನೂರಿನಲ್ಲಿ 65 ಅತಿ ಸೂಕ್ಷ್ಮ ಮತಗಟ್ಟೆ

ಅಶೋಕ್ ಕುಮಾರ್ ಎನ್

ಸಿಂಧನೂರು: ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದು, ಚುನಾವಣಾ ಸಿಬ್ಬಂದಿ ಮಂಗಳವಾರ ಮತಗಟ್ಟೆಗೆ ತೆರಳಿದರು. 1300 ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.

ಸ್ಥಳೀಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬೆಳಗ್ಗೆಯಿಂದಲೇ ಮತದಾನಕ್ಕೆ ತಯಾರಿ ನಡೆಸಲಾಯಿತು. ಸಿಬ್ಬಂದಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿಬ್ಬಂದಿ ಮತಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ಪಡೆದುಕೊಂಡು ಮತಗಟ್ಟೆಗಳಿಗೆ ತೆರಳಿದರು. ಸಿಬ್ಬಂದಿಯನ್ನು ಮತಗಟ್ಟೆಗೆ ಬಿಟ್ಟುಬರಲು 22 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಒಂದು ಬಸ್‌ನಲ್ಲಿ ಐದರಿಂದ ಆರು ಮತಗಟ್ಟೆ ಸಿಬ್ಬಂದಿಯನ್ನು ಕಳಿಸಲಾಯಿತು.

269 ಮತಗಟ್ಟೆಗಳ ಪೈಕಿ 65 ಅತೀ ಸೂಕ್ಷ್ಮ ಮತ್ತು 5 ದುರ್ಬಲ ಮತಗಟ್ಟೆ ಎಂದು ಗುರುತಿಸಲಾಗಿದೆ. ಸಿಂಧನೂರಿನ ಕೆಇಬಿ, ಎಲೆಕೂಡ್ಲಿಗಿ, ಆರ್.ಎಚ್.ನಂ.2, ಗಿಣಿವಾರ ಹಾಗೂ ತಿಮ್ಮಾಪುರ ದುರ್ಬಲ ಮತಗಟ್ಟೆಗಳಾಗಿವೆ. 1 ಡಿವೈಎಸ್, 6 ಪಿಎಸ್‌ಐ, 22 ಎಎಸ್‌ಐ, 159 ಪಿಸಿ, 151 ಹೋಮ್ ಗಾರ್ಡ್ ಹಾಗೂ 233 ಪ್ಯಾರಾ ಮಿಲಿಟರಿ ಸಿಬ್ಬಂದಿ ನಿಯೋಜಿಸಲಾಗಿದೆ.