ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸದ ಬಗ್ಗೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾಹಿತಿ ನೀಡಿದರು.  
ಜಿಲ್ಲೆ

36 ದಿನಗೂಲಿ ನೌಕರರಿಗೆ ಪರಿಸ್ಕೃತ ವೇತನ ನೀಡಲು ನಗರಸಭೆ ಒಪ್ಪಿಗೆ

ಸಿಂಧನೂರು: ನಗರಸಭೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ 36 ದಿನಗೂಲಿ ನೌಕರರಿಗೆ ಕಾರ್ಮಿಕ ಇಲಾಖೆ ಅಧಿಸೂಚನೆಯ ಮೇರೆಗೆ ಪರಿಷ್ಕೃತ ವೇತನ ಮಂಜೂರು ಮಾಡಲು ನಗರಸಭೆಯ ಸರ್ವ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.

ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ಮಂಜುನಾಥ ಗುಂಡೂರು, ತಲಾ ಒಬ್ಬ ಪೌರಕಾರ್ಮಿಕರಿಗೆ 15891 ರೂ., ಡ್ರೈವರ್‌ಗಳಿಗೆ 14016 ರೂ., ನೀರು ಸರಬರಾಜು ಸಹಾಯಕರಿಗೆ 13659 ರೂ., ಗಾರ್ಡನರ್‌ಗೆ 13070 ರೂ., ಕಂಪ್ಯೂಟರ್ ಆಪರೇಟರ್‌ಗೆ 15237 ರೂ. ವೇತನವನ್ನು ಏಪ್ರಿಲ್ 1 ರಿಂದ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಆದರ್ಶ ಕಾಲನಿಯಲ್ಲಿರುವ ಐದು ನಿವೇಶನಗಳಿಗೆ ಎಲ್ಲ ದಾಖಲಾತಿಗಳಿದ್ದು, ಅವುಗಳಿಗೆ ಅನುಮತಿ ನೀಡುವ ಕುರಿತು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಸಭೆಯ ಗಮನಕ್ಕೆ ತಂದರು. ಸದಸ್ಯ ಚಂದ್ರಶೇಖ ಮೈಲಾರ ಮುಟೇಶನ್, ಫಾರಂ ನಂ.3 ಇಲ್ಲದೆ ಅದ್ಹೇಗೆ ಅಪ್ರೋಲ್ ಕೊಡುತ್ತೀರಿ? ಈ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ಎಂದು ವಾಗ್ವಾದ ನಡೆಸಿದರು.

ಆಗ ಸದಸ್ಯ ಕೆ.ಹನುಮೇಶ ಈ ಹಿಂದೆಯೇ ಎಲ್ಲ ಮಾಹಿತಿ ಸದಸ್ಯರಿಗಿದೆ. ಇದಕ್ಕೆ ಒಪ್ಪಿಗೆಯನ್ನು ಸೂಚಿಸಲಾಗಿದೆ. ಆದರಿಗ ಸೇಲ್ ಡೀಲ್ ಸೇರಿದಂತೆ ಎಲ್ಲ ದಾಖಲೆಗಳಿದ್ದು, ಹಳೇ ನಿವೇಶನ ಇದಾಗಿದೆ. ಈಗ ದಾಖಲೆ ಬಗ್ಗೆ ಮಾತನಾಡಿದರೆ, ಈ ಹಿಂದೆ ಮಾಡಿದ ಎಲ್ಲ ದಾಖಲೆಗಳನ್ನು ತೆಗೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಎಸ್‌ಎಫ್‌ಸಿ ಅನುದಾನ ನಗರಸಭೆಗೆ ಬಂದಿದ್ದು, ಎಲ್ಲ ವಾರ್ಡ್‌ಗಳಿಗೆ ತಲಾ 10 ಲಕ್ಷ ರೂ.ದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುವುದು. ಜತೆಗೆ ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿಗಳು ಇದ್ದರೆ ಪ್ರತ್ಯೇಕವಾಗಿ ಮಾಹಿತಿ ನೀಡಿದರೆ ಹಣ ಮೀಸಲಿಡಲಾಗುವುದು. ಎಸ್‌ಎಫ್‌ಸಿಯ 5 ಕೋಟಿ ರೂ.ಯಲ್ಲಿ ಒಂದು ಕೋಟಿ ರೂ. ಕೆರೆ ದುರಸ್ತಿಗೆ ಬಳಸಿಕೊಳ್ಳಲಾಗಿದೆ. ಉಳಿದ ನಾಲ್ಕು ಕೋಟಿ ರೂ.ಯಲ್ಲಿ ಯಾವುದಕ್ಕೆ ಬಳಸಬೇಕು ಎಂದು ಶಾಸಕರೊಂದಿಗೆ ಸಭೆ ನಡೆಸಿ ತೀರ್ಮಾಣ ಕೈಗೊಳ್ಳೋಣ ಎಂದು ತಿಳಿಸಿದರು. ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸದಸ್ಯರು ಒಪ್ಪಿಗೆಯನ್ನು ಪಡೆಯಲಾಯಿತು. ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಸುರೇಶ ಜಾದವ್ ಇದ್ದರು.