ಸಿಂಧನೂರು ನಗರಸಭೆಯ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಿಯಾಂಕಾ, ಮಂಜುಳಾ ಅವರನ್ನು ಶಾಸಕ ಹಂಪನಗೌಡ ಬಾದರ್ಲಿ ಸನ್ಮಾನಿಸಿದರು. ಜೆಡಿಎಸ್ ಸದಸ್ಯರಾದ ಚಂದ್ರಶೇಖರ ಮೈಲಾರ, ಜಿಲಾನಿಪಾಷಾ ಇದ್ದರು. 
ಜಿಲ್ಲೆ

ಸಿಂಧನೂರು ನಗರಸಭೆಗೆ ಪ್ರಿಯಾಂಕಾ ಅಧ್ಯಕ್ಷೆ

ಸಿಂಧನೂರು: ಇಲ್ಲಿನ ನಗರಸಭೆಯಲ್ಲಿ ಗುರುವಾರ ಅಧ್ಯಕ್ಷೆ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಿಯಾಂಕಾ ವಿಠ್ಠಲರಾವ್ ಹಾಗೂ ಮಂಜುಳಾ ಪ್ರಭುರಾಜ ಕರ್ಪೂರಮಠ ಅವಿರೋಧವಾಗಿ ಆಯ್ಕೆಯಾದರು.

ಎಸ್ಟಿ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ವಿಠ್ಠಲ ರಾವ್, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಪ್ರಭುರಾಜ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ ಯಾದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು ಘೋಷಿಸಿದರು. ಬಳಿಕ ಚುನಾವಣಾಧಿಕಾರಿ, ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜು ನಾಥ ಗುಂಡೂರು ಅಧ್ಯಕ್ಷೆ- ಉಪಾಧ್ಯಕ್ಷರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಮೀಸಲಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಆ ವರ್ಗದ ಸದಸ್ಯರಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯೆ ಪ್ರಿಯಾಂಕಾ ಕೈಗೆ ಅನಾಯಸವಾಗಿ ಅಧಿಕಾರ ಸಿಕ್ಕಿದೆ.

ಕಾಂಗ್ರೆಸ್‌ಗೆ ಅಧಿಕಾರ: ನಗರಸಭೆ ನೂತನ ಅಧ್ಯಕ್ಷೆ-ಉಪಾಧ್ಯಕ್ಷರನ್ನು ಸನ್ಮಾನಿಸಿದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿರುವುದರಿಂದ ನಮ್ಮ ಪಕ್ಷವೇ ಅಧಿಕಾರದಲ್ಲಿದ್ದಂತೆ. ಪಕ್ಷಾತೀತವಾಗಿ ಚುನಾವಣೆ ನಡೆದಿದೆ ಎಂದರು. ಜೆಡಿಎಸ್ ಪಕ್ಷದ ಸದಸ್ಯೆಯಾಗಿದ್ದ ಪ್ರಿಯಾಂಕಾ, ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆಯೇ ಎಂಬ ಪ್ರಶ್ನೆಗೆ, ಮುಂದೆ ಕಾಯ್ದು ನೋಡಿ ಎಂದಷ್ಟೇ ಶಾಸಕರು ಹೇಳಿದರು.

ಉಳಿದಿರುವ 8 ತಿಂಗಳ ಕಾಲಾವಾಧಿಯಲ್ಲಿ ನಗರದ ಸಮಗ್ರ ಅಭಿವೃದ್ದಿಗೆ ಎಲ್ಲರೂ ಶ್ರಮಿಸಬೇಕು. ಯುಜಿಡಿ, ಕುಡಿವ ನೀರಿನ ಯೋಜನೆ ಅನುಷ್ಠಾನಕ್ಕೆ ನಗರಸಭೆ ಆಡಳಿತ ಮಂಡಳಿ ಗಮನಹರಿಸಬೇಕು ಎಂದು ತಿಳಿಸಿದರು.

ನಾನು ಜೆಡಿಎಸ್ ಪಕ್ಷದ ಸದಸ್ಯೆಯಾಗಿದ್ದರೂ ಎಲ್ಲರ ಬೆಂಬಲದಿಂದ ಅಧ್ಯಕ್ಷೆಯಾಗಿದ್ದೇನೆ. ಶಾಸಕ ಹಂಪನಗೌಡ ಬಾದರ್ಲಿ ಅವರ ಸಲಹೆ ಹಾಗೂ ಬೆಂಬಲದಿಂದ ಸಿಂಧನೂರು ನಗರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ. ಕಡಿಮೆ ಅವಧಿ ಇರುವುದರಿಂದ ಕೆಲಸಕ್ಕೆ ಒತ್ತು ನೀಡಲಾಗುವುದು. ಪ್ರಿಯಾಂಕಾ ವಿಠ್ಠಲರಾವ್ ನಗರಸಭೆ ಅಧ್ಯಕ್ಷೆ, ಸಿಂಧನೂರು