ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದ ರೈತರೀಗ ಸಂಕಷ್ಟದಲ್ಲಿ
ಅಶೋಕ ಬೆನ್ನೂರು
ಸಿಂಧನೂರು: ಖರೀದಿ ಕೇಂದ್ರಕ್ಕೆ ನೀಡಿದ್ದ ಐದು ಲಕ್ಷಕ್ಕೂ ಅಧಿಕ ಕ್ವಿಂಟಲ್ ಜೋಳದ ರೈತರ ಹಣ ಖಾತೆಗೆ ಬಂದಿಲ್ಲ. ಈಗ ಮುಂಗಾರು ಬಿತ್ತನೆ ಚುರುಕುಗೊಂಡಿದ್ದು, ರೈತಾಪಿ ವರ್ಗಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಕೇಂದ್ರದಲ್ಲಿ ಹೆಚ್ಚಿನ ಬೆಂಬಲ ಬೆಲೆ ಇರುವುದರಿಂದ ಮೂರು ವರ್ಷಗಳಿಂದ ರೈತರು ಜೋಳವನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಎಪಿಎಂಸಿ ಮಾರುಕಟ್ಟೆ ಯಲ್ಲಿ ಜೋಳ ಮಾರದೆ ಕೇಂದ್ರದ ಬೆಂಬಲ ಬೆಲೆಗೆ ನೀಡುತ್ತಿದ್ದಾರೆ. ಕಳೆದ ಎರಡು ವರ್ಷವೂ ರೈತರ ಖಾತೆಗೆ ನಿಗದಿತ ಸಮಯದಲ್ಲಿ ಹಣ ಜಮಾ ಆಗಿದ್ದರಿಂದ ರೈತರಿಗೂ ಸರ್ಕಾರದ ಖರೀದಿ ಕೇಂದ್ರದ ಬಗ್ಗೆ ನಂಬಿಕೆ ಬಂದಿತ್ತು. ಈ ಬಾರಿಯೂ ಅದೇ ಭರವಸೆಯಲ್ಲಿ ತಾಲೂಕಿನಲ್ಲಿ ಐದು ಲಕ್ಷಕ್ಕೂ ಅಧಿಕ ಕ್ವಿಂಟಲ್ ಜೋಳವನ್ನು ಖರೀದಿ ಕೇಂದ್ರಕ್ಕೆ ರೈತರು ಮಾರಿದ್ದರು. ಕಳೆದ ತಿಂಗಳಿಂದಲೂ ಖಾತೆಗೆ ಹಣ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈಗಾಗಲೇ ಮುಂಗಾರು ಮಳೆ ಬಿದ್ದಿದ್ದು ಬಿತ್ತನೆಗೂ ಸಕಾಲವಾಗಿದೆ. ಆದರೆ, ಬಿತ್ತನೆಗೆ ಬೀಜ-ಗೊಬ್ಬರ ಸೇರಿ ಇತರೆ ಖರ್ಚುಗಳಿಗಾಗಿ ರೈತರ ಬಳಿ ಹಣ ಇಲ್ಲದಂತಾಗಿದೆ. ಇಂದು-ನಾಳೆ ಎನ್ನುತ್ತಲೇ ಖಾತೆಗೆ ಹಣ ಹಾಕಲು ಸರ್ಕಾರ ಮೀನ-ಮೇಷ ಏಣಿಸುತ್ತಿದೆ.
ಸಿಂಧನೂರಿನ ಟಿಎಪಿಸಿಎಂಎಸ್‌ನಿಂದ 49800 ಕ್ವಿಂಟಲ್, ಮಾಡಸಿರವಾರ ರೈತ ಉತ್ಪಾದಕ ಸಂಘದಿಂದ ಒಂದು ಲಕ್ಷ ಕ್ವಿಂಟಲ್, ಬೂದಿಹಾಳದಲ್ಲಿ 70 ಸಾವಿರ ಕ್ವಿಂಟಲ್, ಜವಳಗೇರಾ 50 ಸಾವಿರ ಕ್ವಿಂಟಲ್, ವಲ್ಕಂದಿನ್ನಿ 50 ಸಾವಿರ ಕ್ವಿಂಟಲ್, ಬಾದರ್ಲಿ 70 ಸಾವಿರ ಕ್ವಿಂಟಲ್, ಅಲಬನೂರು 40 ಸಾವಿರ ಕ್ವಿಂಟಲ್, ಅರಗಿನಮರ 15 ಸಾವಿರ ಕ್ವಿಂಟಲ್, ತುರ್ವಿಹಾಳ 15 ಸಾವಿರ ಕ್ವಿಂಟಲ್, ಗುಡದೂರು 8 ಸಾವಿರ ಕ್ವಿಂಟಲ್, ಹುಡಾ 33 ಸಾವಿರ ಕ್ವಿಂಟಲ್ ಹೀಗೆ ರೈತ ಉತ್ಪಾದಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜೋಳ ಖರೀದಿ ಮಾಡಲಾಗಿದೆ.
ಮುಂಗಾರು ಹಂಗಾಮು ಆರಂಭವಾಗಿ ಕೃಷಿ ಚಟುವಟಿಕೆ ಗರಿಗೆದರಿವೆ. ಕೂಡಲೇ ಜೋಳದ ಹಣವನ್ನು ರೈತರ ಖಾತೆಗೆ ಜಮಾವಣೆ ಮಾಡಲು ಕ್ರಮಕೈಗೊಳ್ಳಬೇಕೆಂದು ಆಹಾರ ಸಚಿವಗೆ ಶಾಸಕ ಹಂಪನಗೌಡ ಬಾದರ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ. ಮುಂಗಾರು ಆರಂಭವಾಗಿರುವುದರಿಂದ ಬಿತ್ತನೆ ಸೇರಿ ಇತರ ಕಾರ್ಯಕ್ಕೆ ರೈತರಿಗೆ ಹಣದ ಅವಕಶ್ಯತೆ ಇರುವುದರಿಂದ ಜರೂರಾಗಿ ಜೋಳದ ಹಣವನ್ನು ರೈತರ ಖಾತೆಗೆ ಹಾಕಲು ಸರ್ಕಾರ ಮುಂದಾಗಬೇಕು ಎಂಬುದು ಕೃಷಿಕರ ಒತ್ತಾಯವಾಗಿದೆ.
ಎರಡು ವರ್ಷಗಳಿಂದ ಜೋಳಕ್ಕೆ ಉತ್ತಮ ಬೆಂಬಲ ಬೆಲೆ ಸಿಗುತ್ತಿರುವುದರಿಂದ ಎರಡು ವರ್ಷದಿಂದ ನೇರವಾಗಿ ಖರೀದಿ ಕೇಂದ್ರಕ್ಕೆ ನೀಡುತ್ತಿದ್ದೇವೆ. ಈಸಲ ಖರೀದಿ ಕೇಂದ್ರಕ್ಕೆ ನೀಡಿ ಎರಡು ತಿಂಗಳು ಕಳೆದರೂ ಇದುವರೆಗೆ ಖಾತೆಗೆ ಹಣ ಬಂದಿಲ್ಲ. ಮುಂಗಾರು ಬಿತ್ತನೆಗೆ ಹಣ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಜೋಳದ ಹಣ ಬಿಡುಗಡೆ ಮಾಡಬೇಕು.ಲಿಂಗನಗೌಡ ಮಾ.ಪಾ. ರೈತ, ತಿಮ್ಮಾಪುರ
ಕಳೆದ ಮಾರ್ಚ್ - ಏಪ್ರಿಲ್‌ನಲ್ಲಿ ರೈತರು ಟಿಎಪಿಸಿಎಂಎಸ್ ಖರೀದಿ ಕೇಂದ್ರಕ್ಕೆ 49,800 ಕ್ವಿಂಟಲ್ ಜೋಳ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇನ್ನೂ ಎರಡ್ಮೂರು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ. ಬಳಿಕ ರೈತರ ಖಾತೆಗೆ ಜಮಾ ಮಾಡುವ ಮಾಹಿತಿ ಇದೆ.ಹನುಮರಡ್ಡಿ ನಿಡಿಗೋಳ ವ್ಯವಸ್ಥಾಪಕ, ಟಿಎಪಿಸಿಎಂಎಸ್, ಸಿಂಧನೂರು.