ಸಿಂಧನೂರು ಗಾಂಧಿವೃತ್ತ ಬಳಿ ರಸ್ತೆ ಸಂಚಾರ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಸುರೇಶ ಹಚ್ಚೊಳ್ಳಿ, ಬಸವರಾಜ ಗೋಡಿಹಾಳ, ಬಸವರಾಜ ಗೌಡನಬಾವಿ ಇತರರಿದ್ದರು. 
ಜಿಲ್ಲೆ

ಜೋಳ ಖರೀದಿ ನಿರಾಕರಣೆಗೆ ಆಕ್ರೋಶ

ಸಿಂಧನೂರು: ನಗರದ ಟಿಎಪಿಸಿಎಂಎಸ್‌ನ ಜೋಳ ಖರೀದಿ ಕೇಂದ್ರದಲ್ಲಿ ಉತ್ಪನ್ನ ಗುಣಮಟ್ಟ ದಿಂದ ಕೂಡಿಲ್ಲ ಎಂದು ಅಧಿಕಾರಿಗಳು ಖರೀದಿಗೆ ನಿರಾಕರಿಸುತ್ತಿರುವುದನ್ನು ವಿರೋಧಿಸಿ ಗುರುವಾರ ನಗರದ ಗಾಂಧಿ ವೃತ್ತದಲ್ಲಿ ರೈತರು ಟ್ರ್ಯಾಕ್ಟರ್‌ಗಳೊಂದಿಗೆ ದಿಢೀರ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಟಿಎಪಿಸಿಎಂಎಸ್ ಖರೀದಿ ಕೇಂದ್ರದಿಂದ ಟ್ರ್ಯಾಕ್ಟರ್‌ಗಳ ಸಮೇತ ಜೋಳದ ಚೀಲಗಳನ್ನು ತುಂಬಿಕೊಂಡು ಬಂದ ರೈತರು, ರಸ್ತೆಬದಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತೀರಾ ಕಳಪೆಯಾದ ಜೋಳ ಖರೀದಿಸಲು ಕಷ್ಟವಾಗುತ್ತದೆ. ಸಾಧ್ಯವಾದಷ್ಟು ಗುಣಮಟ್ಟ ಇರಬೇಕು ಎಂದರು.

ಹವಾಮಾನ ವೈಪರೀತ್ಯದಿಂದ ಕೆಲವೊಂದು ಜೋಳ ಕಪ್ಪಾಗಿವೆ ಎಂದು ರೈತರು ತಿಳಿಸಿದರು. ಹುಳ ಹತ್ತಿದ ಜೋಳ ಖರೀದಿಸಿದರೆ ಸಮಸ್ಯೆಯಾಗುತ್ತದೆ. ಮುಂದಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಜೋಳ ಹೋದಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ಆದಷ್ಟು ಗುಣಮಟ್ಟದ ಜೋಳವನ್ನು ರೈತರು ಖರೀದಿ ಕೇಂದ್ರಕ್ಕೆ ನೀಡಬೇಕು ಎಂದು ಅಧಿಕಾರಿಗಳು ಹೇಳಿ, ಹೋರಾಟಗಾರರ ಮನವೊಲಿಸಿ ಕಳಿಸಿದರು. ಆಹಾರ ಇಲಾಖೆ ಶಿರಸ್ತೇದಾರ್ ಆನಂದ ಮೋಹನ್, ಕೃಷಿ ಮಾರಾಟ ಮಂಡಳಿ ಡಿಎಂ ಆಶಿಕ್ ಅಲಿ ಇತರರಿದ್ದರು.

ಸಿಂಧನೂರು ಗಾಂಧಿವೃತ್ತ ಬಳಿ ರಸ್ತೆ ಸಂಚಾರ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಸುರೇಶ ಹಚ್ಚೊಳ್ಳಿ, ಬಸವರಾಜ ಗೋಡಿಹಾಳ, ಬಸವರಾಜ ಗೌಡನಬಾವಿ ಇತರರಿದ್ದರು.