ಸಿಂಧನೂರು: ತಾಲೂಕನ್ನು ಸರ್ಕಾರ ಬರಪೀಡಿತ ಪ್ರದೇಶ ಪಟ್ಟಿಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ್ದು ಈಗಾಗಲೇ ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬರಕ್ಕೆ ಸಂಬಂಧಿಸಿದ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಕೆ ಮಾಡಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಮಾತನಾಡಿ, ಈಗಾಗಲೇ ಮೊದಲ, ಎರಡನೆ ಪಟ್ಟಿಯಲ್ಲಿ ರಾಜ್ಯದ ಆಯಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿತ್ತು. ಆದರೆ ಸಿಂಧನೂರು ತಾಲೂಕನ್ನು ಕೈಬಿಡಲಾಗಿತ್ತು.
ಇದಕ್ಕೆ ಕೇಂದ್ರ ಸರ್ಕಾರದ ಮಾನದಂಡ ಕಾರಣವಾಗಿತ್ತು. ಮಳೆ ಅಭಾವ, ಬೆಳೆ ನಷ್ಟ, ತೇವಾಂಶ ಕೊರತೆ ಹಲವು ವಿಧದಲ್ಲಿ ಬರಪೀಡಿತ ಪ್ರದೇಶಗಳು ಆಯ್ಕೆಗೊಂಡಿದ್ದವು.
ಜೂನ್‌ನಲ್ಲಿ ಈ ಭಾಗದಲ್ಲಿ ಮಳೆ ಬಿದ್ದು ತೇವಾಂಶ ಇದ್ದುದ್ದರಿಂದ ಆಯ್ಕೆ ಸಾಧ್ಯವಾಗಿರಲಿಲ್ಲ. ಜುಲೈದಿಂದ ಇಲ್ಲಿಯವರೆಗಿನ ಮೂರನೆ ಹಂತದ 14 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಐದು ಪ್ಲಾಟ್‌ಗಳಲ್ಲಿ ಬರದ ಸರ್ವೇ ನಡೆಸಲಾಗಿದೆ. ಈಗಾಗಲೇ ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ಮಾಡಿದ್ದು ವರದಿ ಆಧರಿಸಿ ಬರ ಕಾಮಗಾರಿ ನಡೆಯಲಿವೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ಮಳೆ ಅಭಾವದಿಂದ ಒಂದು ಬೆಳೆಗೆ ಮಾತ್ರ ನೀರು ಲಭ್ಯವಾಗಿದ್ದು ಈ ಬಾರಿ ಏಕಕಾಲಕ್ಕೆ ಭತ್ತ-ಜೋಳದ ಬೆಳೆ ಇರುವುದರಿಂದ ಟೇಲೆಂಡ್ ಭಾಗದಲ್ಲಿ ಬೆಳೆಗೆ ನೀರು ಸಾಕಾಗುತ್ತಿಲ್ಲ. ಎರಡು ಬೆಳೆಗೂ ನೀರು ಅಗತ್ಯವಾಗಿದ್ದು ಯಾವ ಬೆಳೆ ಉಳಿಸಬೇಕೆಂಬ ಸಂಕಷ್ಟ ಇದೆ.
ಆದರೂ, ರೈತರಿಗೆ ಮನವಿ ಮಾಡಿ ಕೆಳಭಾಗದಲ್ಲಿ ಜೋಳದ ಬೆಳೆಗೆ ನೀರು ಕಳಿಸಲಾಗಿದೆ. ಕೆಳ ಭಾಗಕ್ಕೆ ನೀರು ಮುಟ್ಟಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
2023-24ನೇ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯ ಬೆಳೆಯವಾರು ವಿಮಾ ಮೊತ್ತ ಪಾವತಿಸಬೇಕು.
ನ.15 ರೊಳಗೆ ಸೂರ್ಯಕಾಂತಿ(ನೀರಾವರಿ-ಮಳೆಯಾಶ್ರಿತ), ಮುಸುಕಿನ ಜೋಳ(ನೀರಾವರಿ), ಡಿ. 1 ರೊಳಗಾಗಿ ಜೋಳ(ನೀರಾವರಿ), ಕುಸುಮೆ(ಮಳೆಯಾಶ್ರಿತ), ಗೋಧಿ(ಮಳೆಯಾಶ್ರಿತ), ಡಿ. 15 ರೊಳಗಾಗಿ ಕಡಲೆ(ನೀರಾವರಿ), ಅಗಸೆ(ಮಳೆಯಾಶ್ರಿತ), ಡಿ.16 ರೊಳಗಾಗಿ ಜೋಳ(ಮಳೆಯಾಶ್ರಿತ), ಡಿ.30 ರೊಳಗಾಗಿ ಕಡಲೆ(ಮಳೆಯಾಶ್ರಿತ) ಹಾಗೂ
2024 ಜ.1 ರೊಳಗಾಗಿ ಭತ್ತ(ನೀರಾವರಿ) ಹಾಗೂ ಶೇಂಗಾ(ನೀರಾವರಿ) ಬೆಳೆಗೆ ವಿಮೆ ಪಾವತಿಸಿಕೊಂಡು, ನಷ್ಟವಾದಾಗ ಪರಿಹಾರ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಅರುಣ್ ದೇಸಾಯಿ, ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ಇದ್ದರು.