ಜಿಲ್ಲೆಯಲ್ಲಿ ಸಂಭ್ರಮದ ಯುಗಾದಿ
ಸಿಂಧನೂರು: ಪ್ರತಿ ವರ್ಷ ವಸಂತ ಮಾಸವನ್ನು ವರ್ಷದ ಆರಂಭವೆಂದು ಭಾವಿಸಿ ಯುಗಾದಿ ಆಚರಿಸಲಾಗುತ್ತಿದೆ. ಕುಟುಂಬ ಒಗ್ಗೂಡಿಸುವ ಹಬ್ಬ ಯುಗಾದಿಯಾಗಿದೆ ಎಂದು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಸತ್ಯಗಾರ್ಡನ್‌ನಲ್ಲಿ ಶನಿವಾರ ಸಂಜೆ ಯುಗಾದಿ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಶ್ರೀ ಶುಭಕೃತ ನಾಮ ಸಂವತ್ಸರ ಯುಗಾದಿ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಗತ್ತು ಎಷ್ಟೇ ಆಧುನಿಕತೆಯತ್ತ ನಡೆದರೂ ಕೆಲವು ಸಂಸ್ಕೃತಿ, ಆಚರಣೆಗಳು ಇಂದಿಗೂ ಯಥಾಸ್ಥಿತಿಯಲ್ಲಿ ಉಳಿದಿರುವುದಕ್ಕೆ ಯುಗಾದಿ ಉತ್ತಮ ಉದಾಹರಣೆಯಾಗಿದೆ. ಯುಗಾದಿ ಸಮಯದಲ್ಲಿ ಬಹುತೇಕರು ಸ್ವಗ್ರಾಮಕ್ಕೆ ತೆರಳಿ ಕುಟುಂಬದೊಂದಿಗೆ ಆಚರಣೆ ಮಾಡುವ ಪರಿಪಾಠವಿದೆ ಎಂದರು.
ಉತ್ಸವ ಸಮಿತಿ ಸಂಚಾಲಕ ವೈ.ನರೇಂದ್ರನಾಥ ಮಾತನಾಡಿ, ಎಲ್ಲ ವರ್ಗದವರು ಅದ್ದೂರಿಯಿಂದ ಹಬ್ಬ ಆಚರಣೆ ಮಾಡಿ, ಬೇವು-ಬೆಲ್ಲ ಸವಿದಿದ್ದೇವೆಂದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಯುಗಾದಿಯೇ ನಿಜವಾದ ಹೊಸ ವರ್ಷವಾಗಿದೆ. ಕ್ಯಾಲೆಂಡರ್ ಹೊಸ ವರ್ಷಕ್ಕಿಂತ ಸಂಪ್ರದಾಯ, ನೈಸರ್ಗಿಕವಾದ ಬದಲಾವಣೆಯನ್ನು ಹೊಸ ವರ್ಷವೆಂದು ಪರಿಗಣಿಸಬೇಕೆಂದರು. ಜೋತಿಷಿ ಜಡೆಸ್ವಾಮಿ ಪಂಚಾಂಗ ಪಠಣ ಮಾಡಿದರು. ಜನರಿಗೆ ಬೇವು-ಬೆಲ್ಲ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈಷ್ಣವಿ ಕೆಂಗಲ್ ಹಾಗೂ ಸಮೃದ್ಧಿ ಸಹೋದಿಯರು ಭರತ ನಾಟ್ಯ ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಸಮಿತಿ ಸಂಚಾಲಕ ಡಾ.ಚನ್ನನಗೌಡ ಆರ್.ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ಪಾಟೀಲ್, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಅಧ್ಯಕ್ಷ ಮಧ್ವರಾಜ ಆಚಾರ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಕಮ್ಮವಾರಿ ಸಂಘದ ತಾಲೂಕು ಅಧ್ಯಕ್ಷ ಮುರುಳಿಕೃಷ್ಣ, ಯೋಗ ಶಿಕ್ಷಕ ಎಂ.ಭಾಸ್ಕರ್, ಸತ್ಯನಾರಾಯಣ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬೀರಪ್ಪ ಶಂಭೋಜಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಭೀಮನಗೌಡ ಕೋಳ, ಎನ್.ಶಿವ, ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್, ಹಾಸ್ಯ ಸಾಹಿತಿ ವಿ.ಸಿ.ಪಾಟೀಲ್ ಇದ್ದರು.