ಸಿಂಧನೂರು: ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಆ.10 ರಿಂದ 12ರವರೆಗೆ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕ ದ್ವಾರಕನಾಥಾಚಾರ್ ಹಾಗೂ ವಿಚಾರಣಾಕರ್ತ ರಾಘವೇಂದ್ರರಾವ್ ಕುಲಕರ್ಣಿ ತಿಳಿಸಿದ್ದಾರೆ.
ಆರಾಧನೆಗೂ ಮುನ್ನ ದಿನ ಆ.9 ರಂದು ಸತ್ಯನಾರಾಯಣ ಪೂಜೆ, ಗೋಪೂಜೆ ಧ್ವಜಾರೋಹಣ, ಲಕ್ಷ್ಮಿ ಪೂಜೆ, ಧಾನ್ಯ ಪೂಜೆ ನಡೆಯಲಿವೆ. ಆ.10 ರಿಂದ 12 ರವರೆಗೆ ಪ್ರತಿದಿನ ಶ್ರೀ ಗುರುರಾಯರ ಉತ್ಸವ, ಅಷ್ಟೋತ್ತರ, ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಸಂಜೆ ವಿವಿಧ ಭಜನಾ ಮಂಡಳಿಗಳ ಭಜನೆ, ಸ್ವಸ್ತಿವಾಚನ ನಡೆಯಲಿವೆ.
ಆ.11 ರಂದು ಮಧ್ಯಾಹ್ನ 1 ಗಂಟೆಗೆ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಆ.12 ರಂದು ಶ್ರೀ ಗುರುರಾಯರ ಮಹಾರಥೋತ್ಸವ ಜರುಗಲಿದೆ. ಭಕ್ತಾದಿಗಳು ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಶ್ರೀರಾಮ ಮಂದಿರ: ಸಿಂಧನೂರಿನ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲೂ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಆ.10 ರಿಂದ 12 ರವರೆಗೆ ಜರುಗಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸುಬ್ಬಶಾಸ್ತ್ರಿ ತಿಳಿಸಿದ್ದಾರೆ.
ಪ್ರತಿದಿನ ಬೆಳಗ್ಗೆ ಸುಪ್ರಭಾತ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಸಂಜೆ ವಿದ್ವಾಂಸರಿಂದ ಉಪನ್ಯಾಸ, ಭಜನೆ, ಅಷ್ಟಾವಧಾನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆ.12 ರಂದು ರಥೋತ್ಸವ ನಡೆಯಲಿದ್ದು, ತೀರ್ಥ ಪ್ರಸಾದ ವ್ಯವಸ್ಥೆಯನ್ನು ಸಮಾಜದ ಮುಖಂಡ ವೆಂಕಣ್ಣ ಆಚಾರ್ ಜೋಶಿ ಹಾಗೂ ಅವರ ಮಕ್ಕಳು ವಹಿಸಿಕೊಂಡಿದ್ದಾರೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಬೇಕು ಎಂದು ತಿಳಿಸಿದ್ದಾರೆ.
ತುರ್ವಿಹಾಳ: ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ಶ್ರೀ ಗುರುರಾಯರ ಆರಾಧನೆ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ವಿದ್ವಾಂಸರಿಂದ ಉಪನ್ಯಾಸ, ಸಂಗೀತಗಾರರಿಂದ ಸಂಗೀತ, ರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ. ತಪ್ಪದೆ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂದು ಮಠದ ಕಾರ್ಯದರ್ಶಿ ರಾಘವೇಂದ್ರರಾವ್ ಕುಲಕರ್ಣಿ ತಿಳಿಸಿದ್ದಾರೆ.