ಸಿಂಧನೂರು: ಬಸವಾದಿ ಶರಣರ ತತ್ವಗಳನ್ನು ಆಚರಿಸಿ ತೋರಿಸಿದ ಅಥಣಿ ಶಿವಯೋಗಿಗಳು ಅಧ್ಯಾತ್ಮದ ಕ್ಷೇತ್ರದ ಮೇರು ಪರ್ವತ ಎಂದು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಬಸವಲಿಂಗ ಸ್ವಾಮೀಜಿ ಹೇಳಿದರು.
ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದಲ್ಲಿ ಲಿಂ.ಚನ್ನಬಸವ ಶಿವಯೋಗಿ 42ನೇ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಶ್ರೀಮದಥಣಿ ಶಿವಯೋಗೀಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಅಥಣಿ ಶಿವಯೋಗಿಗಳು ಪ್ರತಿದಿನ ಶಿವಯೋಗ ಮಾಡುವ ಮೂಲಕ ಮಹಾಯೋಗಿಯಾದರು. ಬೇಡಿ ಬಂದವರ ಸಮಸ್ಯೆಗೆ ಪರಿಹಾರ ನೀಡಿದರು. ಇದಕ್ಕೆ ಮಹಾರಾಷ್ಟ್ರದ ಮುಕ್ತಮಹಾನಂದ ಸಾಕ್ಷಿಯಾಗಿದ್ದಾರೆ. ಮುಕ್ತಮಹಾನಂದರು ಅಥಣಿ ಶಿವಯೋಗಿ ಬಳಿ ಬಂದು, ಶಿವಯೋಗ ಸಿದ್ಧಿ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಶಿವಯೋಗಿಗಳು ಪಾದುಕೆಗಳನ್ನು ಕಿವಿಗಿಟ್ಟುಕೊಳ್ಳಿ ಎಂದು ತಿಳಿಸಿದರು. ಅದರಂತೆ ಮಹಾನಂದರು ಪಾದುಕೆಗಳನ್ನು ಇಟ್ಟುಕೊಂಡರು. ನಂತರ ಪಂಚಾಕ್ಷರಿ ಮಂತ್ರ ಉಚ್ಛರಿಸಿತು. ಅಗಲೇ ಶಿವಯೋಗ ಸಿದ್ಧಿ ಪ್ರಾಪ್ತಿಯಾಯಿತು ಎಂದರು.
ಚನ್ನಬಸವ ಶಿವಯೋಗಿ ಲಿಂಗಾನುಷ್ಠಾನ ಮಾಡಿ, ಈ ಭಾಗದ ಭಕ್ತರಿಗೆ ನಿಜ ಕಾಯಕ, ಬದುಕು ತೋರಿಸಿದ್ದಾರೆ. ಶ್ರೀಮಠದಲ್ಲಿ ಲಿಂಗಾನುಷ್ಠಾನವನ್ನು ಸಿದ್ಧಲಿಂಗ ಸ್ವಾಮೀಜಿ ಮುಂದುವರೆಸುತ್ತಿದ್ದಾರೆ. ಈ ಕಾರಣಕ್ಕೆ ಶ್ರೀಮಠ ಬೆಳಕು ಕಂಡಿದೆ. ಇಲ್ಲಿಗೆ ಬರುವ ಭಕ್ತರು ನೆಮ್ಮದಿ, ಶಾಂತಿ ಕಾಣುತ್ತಿದ್ದಾರೆ. ಪ್ರವಚನಗಳು ಮನಸ್ಸಿನ ಮಾಲಿನ್ಯ ತೊಳೆದು, ಒಳ್ಳೆಯ ಬದುಕಿಗೆ ಮುನ್ನುಡಿ ಬರೆಯುತ್ತವೆ ಎಂದರು.
ಅಡವಿ ಅಮರೇಶ್ವರದ ಸುವರ್ಣಗಿರಿ ವಿರಕ್ತಮಠದ ಶಾಂತಮಲ್ಲಸ್ವಾಮೀಜಿ, ಅಗಡಿ ಸುಕ್ಷೇತ್ರ ಅಕ್ಕಿಮಠದ ಡಾ.ಗುರುಲಿಂಗ ಸ್ವಾಮೀಜಿ, ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ, ಶ್ರೀಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಕರೇಗುಡ್ಡ ಪಂಚಮ ಸಿದ್ಧಲಿಂಗ ಸ್ವಾಮೀಜಿ, ದರೂರ ಕೊಟ್ಟೂರು ಸ್ವಾಮೀಜಿ, ಒಳಬಳ್ಳಾರಿ ಬಸವಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ, ರಾಯಚೂರು ಚಂದ್ರಶೇಖರ ದೇವರು, ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಇತರರಿದ್ದರು.
ಸಿಂಧನೂರು ತಾಲೂಕಿನ ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀಮದಥಣಿ ಶಿವಯೋಗೀಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಗದ್ಗುರು ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು.