ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ಗ್ಯಾರೇಜ್ ಕಾರ್ಮಿಕರಿಗೆ ಶಾಸಕ ವೆಂಕಟರಾವ ನಾಡಗೌಡ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿದರು. 
ಜಿಲ್ಲೆ

ಸಿಂಧನೂರು ತಾಲೂಕಿಗೆ ಅತ್ಯಾಧುನಿಕ ಆಂಬುಲೆನ್ಸ್ ಒದಗಿಸುವುದಾಗಿ ಹೇಳಿದ ಶಾಸಕ ವೆಂಕಟರಾವ ನಾಡಗೌಡ

ಸಿಂಧನೂರು: ಶಾಸಕರ ವಿಶೇಷ 25 ಲಕ್ಷ ರೂ. ಅನುದಾನದಲ್ಲಿ ಅತ್ಯಾಧುನಿಕ ಆಂಬುಲೆನ್ಸ್‌ನ್ನು ತಾಲೂಕಿಗೆ ನೀಡಲಾಗುವುದು ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ನಗರದ ಪಿಡಬ್ಲ್ಯುಡಿ ಕ್ಯಾಂಪಿನ ತಮ್ಮ ನಿವಾಸದ ಬಳಿ ಗ್ಯಾರೇಜ್ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ಈ ಅತ್ಯಾಧುನಿಕ ಆಂಬುಲೆನ್ಸ್‌ನಲ್ಲಿ ಆಕ್ಸಿಜನ್, ವೆಂಟಿಲೇಟರ್, ಹವಾನಿಯಂತ್ರಿತ ಬೆಡ್ ಸೇರಿ ಎಲ್ಲಾ ಸೌಕರ್ಯಗಳು ಒಳಗೊಂಡಿರುತ್ತದೆ. ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಇದು ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಕರೊನಾ ಮೂರನೆ ಅಲೆ ಎದುರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಈ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಪ್ರತ್ಯೇಕ ಆಸ್ಪತ್ರೆಗೆ ಚಿಂತಿಸಲಾಗಿದೆ. ಈಗಾಗಲೇ 25 ಬೆಡ್‌ಗಳ ಆಸ್ಪತ್ರೆ ಸಿದ್ಧವಾಗಿದೆ. ಅದಕ್ಕೆ ಬೇಕಾದ ಸೌಲಭ್ಯ ಒದಗಿಸಲಾಗುವುದು. ಮಕ್ಕಳಿಗೆ ಆಕ್ಸಿಜನ್ ಮಾಸ್ಕ್ ಅವಶ್ಯ ಇರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆಯೂ ಗಮನಹರಿಸಲಾಗುವುದು ಎಂದು ತಿಳಿಸಿದರು.

ಎಡದಂಡೆ ನಾಲೆಗೆ ಜೂ.20 ರಿಂದ ನೀರು ಹರಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿರುವ ಬಗ್ಗೆ ಗೊತ್ತಿಲ್ಲ. ಅಧಿಕೃತ ಆದೇಶವು ಇಲ್ಲ. ಸಸಿ ಮಡಿ ಹಾಕಲೇಂದು ನಾಲೆಗೆ ನೀರು ಬಿಟ್ಟ ಉದಾಹರಣೆಗಳಿಲ್ಲ. ನೀರು ಬಿಡುವುದಾದರೆ ಸ್ವಾಗತಿಸುವೆ. ಜಲಾಶಯದಲ್ಲಿ 30 ಟಿಎಂಸಿಗಿಂತ ಅಧಿಕ ನೀರು ಸಂಗ್ರಹವಾದರೆ ಐಸಿಸಿ ಸಭೆ ಕರೆಯಲು ಒತ್ತಾಯಿಸಲಾವುದು ಎಂದರು.