ಸಿಂಧನೂರು: ತಾಲೂಕಿನಲ್ಲಿ ದಶಕದ ಹಿಂದೆ ನಿರ್ಮಿಸಿದ್ದ ಬಸ್ ಶೆಲ್ಟರ್‌ಗಳೆಲ್ಲ ಹಾಳಾಗಿದ್ದು ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‌ಗಾಗಿ ಬಿಸಿಲಿನಲ್ಲಿಯೇ ಕಾಯುವ ಅನಿವಾರ್ಯತೆ ಸೃಷ್ಟಿಯಾಗಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬಸ್ ಶೆಲ್ಟರ್ ಅಥವಾ ಪ್ರಯಾಣಿರ ತಂಗುದಾಣಗಳಿರಲಿಲ್ಲ. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದರು. ಬಿಸಿಲು, ಮಳೆ ಎನ್ನದೆ ಬಸ್‌ಗಳಿಗಾಗಿ ರಸ್ತೆ ಪಕ್ಕದಲ್ಲೇ ಕಾಯುವ ಪರಿಸ್ಥಿತಿ ಇತ್ತು. ಕೊನೆಗೂ ಶಾಸಕರ ವಿಶೇಷ ಅನುದಾನದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 20 ಕ್ಕೂ ಹೆಚ್ಚು ಬಸ್ ಶೆಲ್ಟರ್‌ಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗಿತ್ತು. ಈಗ ಅವೆಲ್ಲ ತುಕ್ಕು ಹಿಡಿದಿದ್ದು, ಅಲ್ಲಿ ಕುಳಿತುಕೊಳ್ಳಲು ಪ್ರಯಾಣಿಕರಿಗೆ ಆಗುತ್ತಿಲ್ಲ. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ರಾಜಕಾರಣಿಗಳ ಫೋಟೊ ತೆರವು ಮಾಡಿದ ಸಂದರ್ಭದಲ್ಲಿ ಶೆಲ್ಟರ್ ಹದಗೆಟ್ಟಿವೆ. ಮುರುಕಲು ಬಸ್ ಶೆಲ್ಟರ್‌ನಲ್ಲಿ ಕುಳಿತರೆ ಬಟ್ಟೆ ಹರಿದ ಉದಾಹರಣೆಗಳಿವೆ. ಇನ್ನು ನೆರಳಂತೂ ದೂರದ ಮಾತು.
ಮಾಜಿ ಸಚಿವರ ಊರಲ್ಲಿಲ್ಲ ಬಸ್ ನಿಲ್ದಾಣ: ಮಾಜಿ ಸಚಿವ ವೆಂಕಟರಾವ ನಾಡಗೌಡರ ತವರೂರು ಜವಳಗೇರಾದಲ್ಲಿ ಬಸ್ ನಿಲ್ದಾಣವಿಲ್ಲ. ಸುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ ಇಲ್ಲಿ ಒಂದು ಬಸ್ ಶೆಲ್ಟರ್ ಇದ್ದು, ತುಕ್ಕು ಹಿಡಿದಿದೆ. ಬೇರೆಡೆ ತೆರಳಲು ಇಲ್ಲಿಗೆ ಬರುವ ಪ್ರಯಾಣಿಕರು ಕಾದು ಸುಸ್ತಾಗುತ್ತಾರೆ. ಸ್ವಗ್ರಾಮಕ್ಕೆ ಒಂದು ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವಲ್ಲಿ ಮಾಜಿ ಸಚಿವರು ಆಸಕ್ತಿ ತೋರಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ತಾಲೂಕಿನ ಕೆ.ಹಂಚಿನಾಳ ಕ್ಯಾಂಪ್, ಜವಳಗೇರಾ, ಶ್ರೀಪುರಂಜಂಕ್ಷನ್, ಅರಗಿನಮರ ಕ್ಯಾಂಪ್, ರೌಡಕುಂದ, ವೆಂಕಟೇಶ್ವರ ಕ್ಯಾಂಪ್ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಬಸ್ ಶೆಲ್ಟರ್‌ಗಳು ಹಾಳಾಗಿವೆ. ಲಕ್ಷಾಂತರ ರೂ. ವ್ಯಯಿಸಿ ಅಳವಡಿಸಿರುವ ಶೆಲ್ಟರ್‌ಗಳು ಗುಜರಿ ಸಾಮಾನುಗಳಂತಾಗಿವೆ. ಹೊಸ ಬಸ್ ತಂಗುದಾಣ ನಿರ್ಮಾಣಕ್ಕೂ ಪ್ರಸ್ತಾವನೆ ಇಲ್ಲ. ಹಳೇ ಬಸ್ ಶೆಲ್ಟರ್ ದುರಸ್ತಿಗೂ ಮುಂದಾಗಿಲ್ಲ. ಈಗ ಬೇಸಿಗೆ ಧಗೆ ಹೆಚ್ಚುತ್ತಿದ್ದು, ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಿದೆ.
ಕೋಟ್: ಸಿಂಧನೂರು ತಾಲೂಕಾದ್ಯಂತ ದಶಕದ ಹಿಂದೆಯೇ ನಿರ್ಮಾಣಗೊಂಡ ಬಸ್ ಶೆಲ್ಟರ್‌ಗಳೆಲ್ಲ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿವೆ. ಈಗ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತುಕೊಳ್ಳಲು ಸಮಸ್ಯೆಯಾಗಿದೆ. ಬೇಸಿಗೆ ಆರಂಭವಾಗಲಿದ್ದು, ಬಸ್ ಶೆಲ್ಟರ್ ದುರಸ್ತಿ ಅಥವಾ ಹೊಸ ತಂಗುದಾಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.
ನಿರುಪಾದಿ ಗೋಮರ್ಸಿ, ಸಿಂಧನೂರು ನಿವಾಸಿ.
ಕೋಟ್: ಸಿಂಧನೂರು ತಾಲೂಕಿನಲ್ಲಿ ಅವಶ್ಯವಿರುವ ಕಡೆಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸಂಬಂಧಿಸಿ ಮಾಹಿತಿ ಕೇಳಲಾಗಿದೆ. ಮುಂದಿನ ದಿನಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿ, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.
ಹಂಪನಗೌಡ ಬಾದರ್ಲಿ, ಶಾಸಕ, ಸಿಂಧನೂರು.