ಸಿಂಧನೂರಿನ ನಗಸರಭೆ ಸಭಾಂಗಣದಲ್ಲಿ ನಗರಸಭೆಯ 2022-23ನೇ ಸಾಲಿನ ಆಯವ್ಯಯ ಸಭೆ ಮಂಗಳವಾರ ನಡೆಯಿತು.  
ಜಿಲ್ಲೆ

ಆದಾಯಕ್ಕೆ ಅನುಗುಣವಾಗಿ ಅಭಿವೃದ್ಧಿ- ಸಿಂಧನೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಸುರೇಶ ಜಾಧವ್ ಹೇಳಿಕೆ

Raichur

ಸಿಂಧನೂರು: ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಮಂಗಳವಾರ 2022-23ನೇ ಸಾಲಿನ 5.25 ಲಕ್ಷ ಉಳಿತಾಯ ಆಯವ್ಯಯ ಮಂಡಿಸಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಸುರೇಶ ಜಾಧವ್ ಮಾತನಾಡಿ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ 1.95 ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 5 ಕೋಟಿ ರೂ., 15ನೇ ಹಣಕಾಸಿನ ಅನುದಾನ 4.73 ಕೋಟಿ ರೂ., ಕುಡಿವ ನೀರಿನ ಅನುದಾನ 35 ಲಕ್ಷ ರೂ., ಎಸ್‌ಎಫ್‌ಸಿ ವೇತನ ಅನುದಾನ 5.03 ಲಕ್ಷ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 1.53 ಕೋಟಿ ರೂ., ಸ್ವಚ್ಛ ಭಾರತ ಮಿಷನ್ ಅನುದಾನ 10 ಲಕ್ಷ ರೂ., ಡೇ ನಲ್ಮ್ ಅನುದಾನ 3.45 ಲಕ್ಷ ರೂ., 2022-23ನೇ ಸಾಲಿನಲ್ಲಿ ನಗರಸಭೆಗೆ ಬರುವ ನಿರೀಕ್ಷಿತ ಸರ್ಕಾರಿ ಅನುದಾನಗಳಾಗಿವೆ. ಸರ್ಕಾರದ ವಿವಿಧ ಅನುದಾನ ಹಾಗೂ ನಗರಸಭೆಯ ಸಂಪನ್ಮೂಲಗಳಿಂದ ಬರುವ ಆದಾಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, 2022-23ನೇ ಸಾಲಿನ ನಿರೀಕ್ಷಿತ ಆದಾಯ 29.34 ಕೋಟಿ ರೂ., ನಿರೀಕ್ಷಿತ ಖರ್ಚು 29.29 ಕೋಟಿ ರೂ.ಯಾಗಿದ್ದು, ನಿವ್ವಳ ಉಳಿತಾಯ 5.25 ಲಕ್ಷ ಆಗಿದೆ ಎಂದು ತಿಳಿಸಿದರು. ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, ನಗರದಲ್ಲಿ ನನೆಗುದಿಗೆ ಬಿದ್ದಿರುವ 24/7 ಕುಡಿವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿಯನ್ನು ಏಪ್ರಿಲ್‌ನೊಳಗೆ ಮುಗಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲಾನಿ ಪಾಷಾ ಹಾಗೂ ಶೇಖರಪ್ಪ ಗಿಣಿವಾರ ಮಾತನಾಡಿ, ನಾಲ್ಕು ಬಾರಿ ಕಾಮಗಾರಿ ಮುಗಿಸುವ ಡೆಡ್‌ಲೈನ್ ನೀಡಿದರೂ ಇನ್ನೂ ಮುಗಿದಿಲ್ಲ. ಬೇಜಾವಬ್ದಾರಿ ಅಧಿಕಾರಿಗಳಿದ್ದಾರೆಂದು ದೂರಿದರು. ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರು, ಅಧಿಕಾರಿಗಳಿದ್ದರು.