ಸಿಂಧನೂರಿನ ಟೌನ್‌ಹಾಲ್‌ನಲ್ಲಿ ಭಾನುವಾರ ರಾಜೇಂದ್ರಕುಮಾರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 30ನೇ ಶಾಲಾ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಉದ್ಘಾಟಿಸಿದರು. ಮಾಜಿ ಸಚಿವ ವೆಂಕಟರಾವ ನಾಡಗೌಡ, ಸರಸ್ವತಿ ಪಾಟೀಲ್, ಅಶೋಕಗೌಡ ಗದ್ರಟಗಿ, ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಇದ್ದರು. 
ಜಿಲ್ಲೆ

ಮೌಲ್ಯಯುತ ಶಿಕ್ಷಣ ನೀಡಲು ಮುಂದಾಗಿ

ಸಿಂಧನೂರು: ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪೈಪೋಟಿ ನಡೆಸಿದ್ದು, ಕಾಲೇಜ್‌ಗೆ ವಿದ್ಯಾರ್ಥಿಗಳ ಪ್ರವೇಶ ಆರೋಗ್ಯಕರವಾಗಿರಲಿ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ಟೌನ್‌ಹಾಲ್‌ನಲ್ಲಿ ಭಾನುವಾರ ರಾಜೇಂದ್ರಕುಮಾರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 30ನೇ ಶಾಲಾ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೌಲ್ಯಯುತ ಶಿಕ್ಷಣ ನೀಡುವ ಸಂಸ್ಥೆಗಳು ಕಡಿಮೆ ಆಗುತ್ತಿವೆ. ಹಣ ಗಳಿಕೆಗೆ ಮುಂದಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ತಾಲೂಕಿನಲ್ಲಿ ಕಾಲೇಜ್‌ಗಳಿಗೆ ಪ್ರವೇಶಾತಿ ಪಡೆಯಲು ಕೆಲ ಸಂಸ್ಥೆಗಳು ಅನುಸರಿಸುತ್ತಿರುವ ಮಾರ್ಗಗಳು ಸರಿಯಿಲ್ಲ. ಇದರಿಂದ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಮುಜುಗರ ಉಂಟು ಮಾಡುತ್ತಿದೆ. ಈ ಸಂಸ್ಥೆ ಕೂಡ 30 ವರ್ಷದಿಂದ ಗುಣಮಟ್ಟ ಉಳಿಸಿಕೊಂಡು ಬಂದಿದೆ ಎಂದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಸಂಸ್ಕಾರ, ಮೌಲ್ಯ ಇಲ್ಲದ ಶಿಕ್ಷಣ ಅಪಾಯಕಾರಿಯಾಗಿದೆ. ಮಕ್ಕಳಲ್ಲಿ ಶಿಸ್ತು ಮೂಡಿಸಬೇಕು. ತಂದೆಯ ಶ್ರಮ ಅರಿಯಬೇಕು. ಎಲ್ಲರೂ ಸರ್ಕಾರಿ ಉದ್ಯೋಗಕ್ಕಾಗಿ ಓದಬಾರದು. ಸ್ವಾವಲಂಬಿ ಬದುಕು ಕಟ್ಟಿಕೊಡುವ ಶಿಕ್ಷಣ ಪಡೆಯಲು ಮುಂದಾಗಬೇಕು. ಈ ಭಾಗದಲ್ಲಿ ಉದ್ಯೋಗ ಕಟ್ಟಿಕೊಡುವ ಕೈಗಾರಿಕೆಗಳನ್ನು ಸ್ಥಾಪಿಸುವಂತಾಗಬೇಕು. ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿ ಮಾಡಬೇಕೆಂದರು. ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊಟ್ಟ ಮೊದಲ ಸರ್ಕಾರಿ ಮಹಾವಿದ್ಯಾಲಯ ಆರಂಭಿಸಿದ ಕೀರ್ತಿ ಮಾಜಿ ಶಾಸಕ ಅಮರೇಗೌಡ ಗದ್ರಟಗಿಯವರಿಗಿದೆ. ಅವರ ಆಶಯದಂತೆ ಕಳೆದ ಮೂವತ್ತು ವರ್ಷಗಳಿಂದೆ ಆರಂಭಗೊಂಡ ಶಾಲೆಯು ಹೆಸರು ಮಾಡಿದೆ ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಸರಸ್ವತಿ ಪಾಟೀಲ್ ಮಾತನಾಡಿ, ಬಡ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ವೆಂಕನಗೌಡ ಗದ್ರಟಗಿ ಮಾತನಾಡಿದರು. ಸಂಸ್ಥೆಯ ಅಶೋಕಗೌಡ ಗದ್ರಟಗಿ, ಮುಖ್ಯಶಿಕ್ಷಕರಾದ ಶಿವರಾಜ, ತುಳಜಾರಾಣಿ, ಶಿಕ್ಷಕರು ಇದ್ದರು.