ಸಿಂಧನೂರು: ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ ಭತ್ತದ ಬೆಳೆ ಹಾನಿಯಾಗಿದ್ದು, ಸರ್ಕಾರ ಕೂಡಲೇ ಸರ್ವೇ ನಡೆಸಿ, ಹೆಕ್ಟೇರ್‌ಗೆ 50 ಸಾವಿರ ರೂ. ನೀಡಬೇಕೆಂದು ಜಿಪಂ ಮಾಜಿ ಸದಸ್ಯ, ಬಿಜೆಪಿ ಪ್ರಮುಖ ಕೆ.ಕರಿಯಪ್ಪ ಒತ್ತಾಯಿಸಿದರು.
ತಾಲೂಕಿನ ಕುನ್ನಟಗಿ ಹೋಬಳಿ ವ್ಯಾಪ್ತಿಯ ತಿಪ್ಪನಹಟ್ಟಿ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ನೆಲಕಚ್ಚಿರುವ ಭತ್ತದ ಬೆಳೆಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿರುವ ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ. ಕಳೆದ ನವೆಂಬರ್‌ನಲ್ಲಿಯೂ ಅಪಾರ ಬೆಳೆ ನಷ್ಟವಾದರೂ ಸಮರ್ಪಕ ಪರಿಹಾರ ನೀಡದೆ ರೈತರನ್ನು ವಂಚಿಸಿದೆ. ಹೀಗಾಗಿ ಈಗ ನಷ್ಟವಾದ ಬೆಳೆ ಸರ್ವೇ ಮಾಡಿ, ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ಒದಗಿಸಬೇಕು. ರೈತರನ್ನು ಕಡೆಗಣಿಸಿದರೆ, ರೈತರೊಂದಿಗೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಪ್ರಮುಖರಾದ ಲಿಂಗರಾಜ ಹೂಗಾರ, ಸೋಮನಾಥ ಕಲ್ಲೂರು, ವೆಂಕಣ್ಣ ತಿಪ್ಪನಹಟ್ಟಿ, ಶರಣಪ್ಪ, ನಾಗಪ್ಪ, ರಮೇಶ, ಮಲ್ಲಪ್ಪ, ಲಿಂಗನಗೌಡ, ಯಮನೂರು ಮುಳ್ಳೂರು ಇತರರಿದ್ದರು.