ಸಿಂಧನೂರು: ನಗರದ ಪಿಜಿಯೊಂದರಲ್ಲಿ ಪೋಸ್ಟ್‌ಮನ್‌ಗಳು ಮೂಟೆ ಕಟ್ಟಿ ಇಟ್ಟಿದ್ದ ಅಂಚೆಪತ್ರಗಳನ್ನು ಇಲಾಖೆ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.
ಅಂಚೆಪತ್ರಗಳನ್ನು ಸಂಬಂಧಿಸಿದವರಿಗೆ ಹಂಚದೆ ಮೂಟೆ ಕಟ್ಟಿಟ್ಟಿರುವ ಬಗ್ಗೆ ಪಿಜಿ ಮಾಲೀಕ ಅಂಚೆ ಕಚೇರಿಗೆ ಮಾಹಿತಿ ನೀಡಿದ್ದರು. ಪಿಜಿಯಲ್ಲಿ ಪಗಡದಿನ್ನಿ, ಗೊರೇಬಾಳ ಹಾಗೂ ಸಿಂಧನೂರಿನ ಪೋಸ್ಟ್‌ಮನ್‌ಗಳು ವಾಸ್ತವ್ಯ ಹೂಡಿದ್ದು, ಕಳೆದ ಒಂದು ತಿಂಗಳಿಂದ ಬಂದಿದ್ದ ಅಂಚೆಪತ್ರಗಳನ್ನು ಸಂಬಂಧಿಸಿದವರಿಗೆ ತಲುಪಿಸದೆ ಪಿಜಿಯಲ್ಲಿಯೇ ಮೂಟೆ ಕಟ್ಟಿಟ್ಟಿದ್ದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಸ್ಥಳೀಯ ಪೋಸ್ಟ್ ಮಾಸ್ಟರ್ ವೆಂಕಣ್ಣ ಭೋಗಾವತಿ ಅಂಚೆ ಪತ್ರಗಳ ಮೂಟೆಗಳನ್ನು ವಶಕ್ಕೆ ಪಡೆದುಕೊಂಡರು. ಸೋಮವಾರ ಮೂಟೆಯಲ್ಲಿರುವ ಅಂಚೆ ಪತ್ರಗಳನ್ನು ವಿಲೇವಾರಿ ಮಾಡಲಾಗುವುದು. ತಪ್ಪಿತಸ್ಥ ಪೋಸ್ಟ್‌ಮನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.