ಜಿಲ್ಲೆ

ಪರಿಪೂರ್ಣ ಬದುಕಿಗೆ ಜ್ಞಾನ ಅಗತ್ಯ; ಡಾ.ಚನ್ನನಗೌಡ ಪಾಟೀಲ್ ಕಿವಿಮಾತು

ಸಿಂಧನೂರು: ವಿದ್ಯಾರ್ಥಿಗಳು ಪರೀಕ್ಷೆ ದೃಷ್ಟಿಯಿಂದ ಓದದೆ, ಜ್ಞಾನಾರ್ಜನೆಗಾಗಿ ಅಧ್ಯಯನಶೀಲರಾಗಬೇಕೆಂದು ನೇತ್ರ ತಜ್ಞ ಡಾ.ಬಿ.ಎನ್.ಪಾಟೀಲ್ ಹೇಳಿದರು.

ನಗರದ ವಿಸಿಬಿ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಪರಿಪೂರ್ಣ ಬದುಕು ಕಟ್ಟಿಕೊಳ್ಳಲು ಜ್ಞಾನ ಅತ್ಯವಶ್ಯವಾಗಿದೆ. ಕಾಟಾಚಾರದ ಓದಿನಿಂದ ಸಾಧನೆ ಅಸಾಧ್ಯ. ಗುರಿ ಸಾಧನೆಗೆ ಸೂಕ್ತ ಮಾರ್ಗದರ್ಶನದಲ್ಲಿ ತರಬೇತಿ ಅಗತ್ಯ ಎಂದರು.

ಉಪನ್ಯಾಸಕ ಸಿರಾಜ್ ಪಾಷಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿಕೊಳ್ಳುವ ಮನೋಭಾವ ಬೆಳೆಯಬೇಕು. ಗುರಿ ಸಾಧನೆಗೆ ಮನೋ ಬಲ ಬೆಳೆಸಿಕೊಳ್ಳಬೇಕು. ಅಂದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು. ಪ್ರಾಚಾರ್ಯ ಬೆಟ್ಟಪ್ಪ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಹನುಮೇಶ ತಿಡಿಗೋಳ, ರಾಮಲಿಂಗಯ್ಯ, ರವಿಕುಮಾರ ಮಸ್ಕಿ, ವಿಸಿಬಿ ಶಿಕ್ಷಣ ಸಂಸ್ಥೆ ಸದಸ್ಯರಾದ ಶರಣಬಸವ ಹಟ್ಟಿ, ಲಿಂಗಾರಡ್ಡಿ ಇದ್ದರು. ಉಪನ್ಯಾಸಕಿ ಅನುಪಮಾ ನಿರೂಪಿಸಿದರು.