ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ನಿರ್ಮಾಣಗೊಂಡಿರುವ ತಾಯಿ-ಮಕ್ಕಳ ಆಸ್ಪತ್ರೆ. 
ಜಿಲ್ಲೆ

ಸಿಂಧನೂರು ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ ?

ಸಿಂಧನೂರು: ನಗರದ ಪಿಡಬ್ಲ್ಯುಡಿ ಕ್ಯಾಂಪ್ ಬಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಬಾಕಿ ಇರುವ ಕೆಲ ಸಣ್ಣಪುಟ್ಟ ಕೆಲಸಗಳ ವಿಳಂಬದಿಂದಾಗಿ ಉದ್ಘಾಟನೆಗೆ ಇನ್ನೂ ಕಾಲ ಕೂಡಿ ಬರುತ್ತಿಲ್ಲ.

ನಾಲ್ಕೈದು ವರ್ಷಗಳ ಹಿಂದೆಯೇ ಆಸ್ಪತ್ರೆ ಎಲ್ಲಿ ನಿರ್ಮಾಣವಾಗಬೇಕೆಂಬ ಗೊಂದಲದ ಮಧ್ಯೆ ಕಲ್ಲೂರು ನಂತರ ಸಿಂಧನೂರು ನಗರದ ಪಿಡಬ್ಲ್ಯುಡಿ ಕ್ಯಾಂಪಿನ ನೀರಾವರಿ ಇಲಾಖೆ ಜಾಗದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಯಿತು. ನಂತರ ವಿಳಂಬ ಮಾಡಿ, ಈಗ ಕಟ್ಟಡ ಬಹುತೇಕ ಪೂರ್ಣಗೊಂಡಿದೆ. ಆದರೂ, ಸಣ್ಣಪುಟ್ಟ ಕೆಲಸಗಳಿವೆ.

ಅದರಲ್ಲೂ ನೀರಿನ ಸಂಗ್ರಹ ತೊಟ್ಟಿ ನಿರ್ಮಾಣ, ವಿದ್ಯುತ್ ಸಂಪರ್ಕ ಕೆಲಸ ಕೊನೆಯ ಹಂತ, ವಿದ್ಯುತ್ ಪರಿವರ್ತಕ ಅಳವಡಿಸುವಿಕೆ, ಲಿಫ್ಟ್, ಕೊಠಡಿಗಳು ಸುಸಜ್ಜಿತಗೊಳಿಸುವುದು ಸೇರಿದಂತೆ ಬಹಳಷ್ಟು ಕೆಲಸಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ತಾಯಿ ಮತ್ತು ಮಕ್ಕಳ ಚಿಕಿತ್ಸೆ ದೃಷ್ಟಿಯಿಂದ ಅತ್ಯಂತ ಅವಶ್ಯವಾಗಿರುವ ಆಕ್ಸಿಜನ್ ಪ್ಲಾಂಟ್ ಅಳವಡಿಸುವ ಕೆಲಸ ಇನ್ನೂ ಆರಂಭವಾಗಿಲ್ಲ.

ಇತ್ತೀಚೆಗೆ ಚೆನ್ನೈ-ಹುಬ್ಬಳ್ಳಿ ಮೂಲದ ಕಂಪನಿಯವರು ಆಸ್ಪತ್ರೆಗೆ ಭೇಟಿ ನೀಡಿ ಹೋಗಿದ್ದಾರೆ ಎನ್ನಲಾಗಿದ್ದು, ಮತ್ತೊಮ್ಮೆ ಟೆಂಡರ್ ಕರೆಯಬೇಕು ಎನ್ನುವ ಚರ್ಚೆಗಳು ನಡೆದಿವೆ. ಇನ್ನೂ ಆಸ್ಪತ್ರೆ ಸುತ್ತಲೂ ಕಾಂಪೌಂಡ್ ನಿರ್ಮಿಸಿಲ್ಲ, ಸಾರ್ವಜನಿಕ ಶೌಚಗೃಹ ವ್ಯವಸ್ಥೆ ಕೈಗೊಂಡಿಲ್ಲ ಎನ್ನುವ ಆರೋಪಗಳೂ ಇವೆ. ಈ ಎಲ್ಲ ಕೆಲಸಗಳನ್ನು ಮುಗಿಸಲು ಇನ್ನೆಷ್ಟು ದಿನಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಐದು ವರ್ಷ ಪೂರ್ಣ: ಕಳೆದ 2020ರ ಏಪ್ರಿಲ್‌ನಲ್ಲಿ ಸರ್ಕಾರ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿತು. ಕಟ್ಟಡ ನಿರ್ಮಾಣಕ್ಕೆ 11 ಕೋಟಿ ರೂ. ಮಂಜೂರಾಗಿದೆ. 60 ಹಾಸಿಗೆ ಸೌಲಭ್ಯವುಳ್ಳ ಆಸ್ಪತ್ರೆ ಇದಾಗಿದ್ದು, ಮೂವರು ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿ ಅವಶ್ಯಕತೆ ಇದೆ. ಐದು ವರ್ಷ ಗತಿಸಿದರೂ ಉದ್ಘಾಟನೆಗೆ ಸಿದ್ಧಗೊಳಿಸಲು ಸಾಧ್ಯವಾಗಿಲ್ಲ. ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು, ಚುರಕು ನೀಡಿದಲ್ಲಿ ಆದಷ್ಟು ಬೇಗ ಆಸ್ಪತ್ರೆ ಉದ್ಘಾಟಿಸಿ, ಸಾರ್ವಜನಿಕರ ಸೇವೆಗೆ ನೀಡಬಹುದಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಆರಂಭವಾದರೆ ಹೆಚ್ಚಿನ ಅನುಕೂಲ: ಸಿಂಧನೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ಯಾವಾಗಲೂ ಸಾರ್ವಜನಿಕರು ಹಾಗೂ ತಪಾಸಣೆಗೆ ಬರುವವರಿಂದ ಗಿಜುಗುಡುತ್ತಿರುತ್ತದೆ. ಹಲವು ವೈದ್ಯರು ಇಲ್ಲಿರುವುದರಿಂದ ದಿನವೂ ರೋಗಿಗಳ ಸಂಖ್ಯೆ ಜಾಸ್ತಿ. ಈ ನಡುವೆ ಹೆರಿಗೆ, ಬಾಣಂತಿಯರಿಗೆ ಚಿಕಿತ್ಸೆ, ಗರ್ಭಿಣಿಯರಿಗೆ ವಿವಿಧ ತಪಾಸಣೆಗಾಗಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ, ಆಸ್ಪತ್ರೆ ಕಟ್ಟಡ ಚಿಕ್ಕದಾಗಿರುವುದರಿಂದ ಹಲವು ಸಮಸ್ಯೆಗಳು ಎದುರಿಸುವಂತಾಗಿದೆ. ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭವಾದರೆ ತಾಲೂಕು ಆಸ್ಪತ್ರೆ ಮೇಲಿನ ಒತ್ತಡ ತಗ್ಗಲಿದೆಂಬ ಆಶಯ ಜನರದ್ದಾಗಿದೆ.

ಸಿಂಧನೂರಿನಲ್ಲಿ ಮಕ್ಕಳ ಆಸ್ಪತ್ರೆ ಕಟ್ಟಡ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಸುಣ್ಣ-ಬಣ್ಣ ಸಹ ಬಳಿಯಲಾಗಿದೆ. ಕೆಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈಗಾಗಲೇ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಆದಷ್ಟು ಬೇಗ ಜನರಿಗೆ ಆಸ್ಪತ್ರೆ ಸೇವೆ ಒದಗಿಸಲಾಗುವುದು.

ನಾಗರಾಜ ಕಾಟ್ವಾ

ಮುಖ್ಯ ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆ, ಸಿಂಧನೂರು 

ಸಿಂಧನೂರಿನಲ್ಲಿ ಹಲವು ಗೊಂದಲ, ಸಮಸ್ಯೆಗಳ ನಡುವೆಯೇ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು, ಬೇಗ ಪೂರ್ಣಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕೂಡಲೇ ಸೌಲಭ್ಯ ಒದಗಿಸಿ, ಆಸ್ಪತ್ರೆ ಉದ್ಘಾಟಿಸಬೇಕು.

ನಿರುಪಾದೆಪ್ಪ ಜೋಳದರಾಶಿ

ವಕೀಲ, ಸಿಂಧನೂರು